ಬೆಂಗಳೂರು, ಏ.18 – ಲೋಕಸಭೆ ಚುನಾವಣೆ ಅಖಾಡಕ್ಕೆ ರಂಗು ಬಂದಿರುವ ಬೆನ್ನಲ್ಲೇ ಹಲವಾರು ಅಚ್ಚರಿಯ ವಿದ್ಯಮಾನಗಳು ನಡೆಯುತ್ತಿವೆ.
ಕಳೆದ ಲೋಕಸಭೆ ಚುನಾವಣೆ ಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಗಮನ ಸೆಳೆದಿದ್ದ ಜೋಡೆತ್ತು ಮತ್ತು ಅಮ್ಮ ಈ ಬಾರಿ ಚುನಾವಣೆಯಲ್ಲಿ ಮೌನಕ್ಕೆ ಶರಣಾಗಿದ್ದಾರೆ.
ಬಿಜೆಪಿ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಸಂಸದ ಸುಮಲತಾ ಅಂಬರೀಶ್ ಅವರು ಅಸಮಾಧಾನಗೊಂಡು ಬಂಡಾಯ ಸಾರುವ ಸೂಚನೆ ನೀಡಿದರಾದರು ಅಂತಿಮವಾಗಿ ಬಿಜೆಪಿ ಹೈಕಮಾಂಡ್ ನಾಯಕರ ಸಂಧಾನಕ್ಕೆ ಸಮ್ಮತಿಸಿ ಬಿಜೆಪಿ ಸೇರ್ಪಡೆಯಾದರು ಅಷ್ಟೇ ಅಲ್ಲ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಎನ್.ಡಿ.ಎ. ಅಭ್ಯರ್ಥಿ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದರು.
ಈ ವೇಳೆ ಅವರ ಮಾನಸ ಪುತ್ರ ಎಂದೇ ಪರಿಗಣಿಸಲ್ಪಡುವ ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಹಾಜರಿದ್ದು ಗಮನ ಸೆಳೆದರು.ಅವರೂ ಕೂಡ ತಾವು ಮಂಡ್ಯದಲ್ಲಿ ಎನ್.ಡಿ.ಎ.ಅಭ್ಯರ್ಥಿಯಾಗಿರುವ ಕುಮಾರಸ್ವಾಮಿ ಪರ ಕೆಲಸ ಮಾಡುವುದಾಗಿ ಹೇಳಿದರು.
ಆದರೆ,ಇದೀಗ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಯ ಕಾವು ತೀವ್ರ ಸ್ವರೂಪ ಪಡೆದುಕೊಂಡಿದೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮತ್ತು ಜೆಡಿಎಸ್ ನ ಕುಮಾರಸ್ವಾಮಿ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಚುನಾವಣೆ ಅಖಾಡದಲ್ಲಿ ತಮ್ಮ ಅಭ್ಯರ್ಥಿಯ ಗೆಲುವಿಗೆ ನಡೆಸುತ್ತಿರುವ ಕಸರತ್ತು ಗಮನ ಸೆಳೆದಿದೆ.
ಇದರ ನಡುವೆ ಸುಮಲತಾ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಲ್ಲಿಯವರೆಗೆ ಜೆಡಿಎಸ್ ನ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರಕ್ಕೆ ಬಂದಿಲ್ಲದಿರುವುದು ಗಮನ ಸೆಳೆಯುತ್ತದೆ.
ಇದರಲ್ಲಿ ಇನ್ನೂ ಒಂದು ವಿಶೇಷವೆಂದರೆ ಕಳೆದ ಬಾರಿ ಸುಮಲದ ಅವರ ಜೊತೆ ನಿಂತು ಅಮ್ಮ ಎಂದು ಸಂಬೋಧಿಸುತ್ತಲೇ ಅವರ ಪರವಾಗಿ ಪ್ರಚಾರ ಮಾಡಿದ ದರ್ಶನ್ ಇದೀಗ ಕಾಂಗ್ರೆಸ್ ಸ್ಟಾರ್ ಚಂದ್ರು ಪರ ಪ್ರಚಾರದ ಅಖಾಡಕ್ಕೆ ಧುಮುಕುವ ಮೂಲಕ ಗಮನ ಸೆಳೆದಿದ್ದಾರೆ.
ಸ್ಟಾರ್ ಚಂದ್ರು ಪರವಾಗಿ ಮಳವಳ್ಳಿ, ಮದ್ದೂರು, ನಾಗಮಂಗಲ ಸೇರಿದಂತೆ ಹಲವೆಡೆ ರೋಡ್ ಶೋ ನಡೆಸಲಿರುವ ದರ್ಶನ್ ಮತ ಯಾಚನೆ ಮಾಡಲಿದ್ದಾರೆ.