ಬೆಂಗಳೂರು, ಏ.18- ಮೈಸೂರಿನಲ್ಲಿ ಕಳೆದ ವರ್ಷ ನಡೆದ ರಾಜ್ಯ ವಕೀಲರ ಸಮ್ಮೇಳನದಲ್ಲಿ 50 ಲಕ್ಷ ರೂಪಾಯಿ ದುರ್ಬಳಕೆ ಆರೋಪ ಕೇಳಿಬಂದಿದೆ ಹಣ ದುರ್ಬಳಕೆ ಮಾಡಿದ ಆರೋಪದ ಮೇಲೆ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ, ಹಾಗೂ ಓರ್ವ ಸದಸ್ಯ ಸೇರಿ ನಾಲ್ವರು ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಾಜ್ಯ ವಕೀಲರ ಪರಿಷತ್ ಸದಸ್ಯ ಹಾಗೂ ಹಿರಿಯ ವಕೀಲ ಎಸ್.ಬಸವರಾಜ್ ಅವರು ನೀಡಿದ ದೂರಿನ ಆಧಾರದ ಮೇಲೆ ಪರಿಷತ್ ನ ನಾಲ್ವರು ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ರಾಜ್ಯ ವಕೀಲರ ಪರಿಷತ್ 2023ರ ಆಗಸ್ಟ್ 12 ಮತ್ತು 13ರಂದು ಎರಡು ದಿನಗಳ ಕಾಲ ಮೈಸೂರಿನಲ್ಲಿ ರಾಜ್ಯ ವಕೀಲರ ಸಮ್ಮೇಳನ ಆಯೋಜಿಸಿತ್ತು. ಈ ಸಮಯದಲ್ಲಿ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ವಕೀಲರಿಂದ ಪ್ರತಿನಿಧಿ ಶುಲ್ಕವಾಗಿ ತಲಾ 1 ಸಾವಿರದಂತೆ ಒಟ್ಟು 1,16,33,000 ರೂ. ಮೊತ್ತವನ್ನು ದೇಣಿಗೆಯಾಗಿ ಸಂಗ್ರಹಿಸಲಾಗಿತ್ತು.
ಇದಲ್ಲದೆ ಸಮ್ಮೇಳನಕ್ಕಾಗಿ ರಾಜ್ಯ ಸರ್ಕಾರ 1.8 ಲಕ್ಷ ರೂ. ಅನುದಾನ ನೀಡಿತ್ತು. ಮತ್ತು ರಾಜ್ಯ ವಕೀಲರ ಪರಿಷತ್‌ನಿಂದ 75 ರೂ. ಲಕ್ಷ ಬಿಡುಗಡೆಯಾಗಿತ್ತು. ಇದೆಲ್ಲಾ ಸೇರಿದಂತೆ ಒಟ್ಟು ಮೊತ್ತ 3,30,33,000 ರೂ. ಸಂಗ್ರಹವಾಗಿತ್ತು. ಈ ಹಣ ಪರಿಷತ್‌ನ ಬ್ಯಾಂಕ್ ಖಾತೆಗೆ ಜಮೆ ಆಗಿದ್ದು, ಆದರೆ ಬಳಕೆಯಲ್ಲಿ ದುರುಪಯೋಗ ನಡೆದಿದೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅಧ್ಯಕ್ಷರು ಮತ್ತು ಇತರರು ಸೇರಿಕೊಂಡು ಪರಿಷತ್‌ನ 50 ಲಕ್ಷ ರೂ. ಮೊತ್ತವನ್ನು ಬ್ಯಾಂಕ್‌ನಿಂದ ನಗದೀಕರಿಸಿಕೊಂಡಿದ್ದಾರೆ. ಸುಳ್ಳು ಲೆಕ್ಕಪತ್ರ ಸೃಷ್ಟಿಸಿದ್ದಾರೆ. ವಕೀಲರ ಸಮುದಾಯಕ್ಕೆ ಸೇರಿದ ಕೋಟ್ಯಂತರ ರೂಪಾಯಿಗಳನ್ನು, ನಕಲಿ ಬಿಲ್ ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಸರ್ಕಾರಕ್ಕೆ ಸಲ್ಲಬೇಕಾದ ಜಿಎಸ್‌ಟಿ ಹಣವನ್ನು ಸಲ್ಲಿಸದೇ ಮೋಸ ಮಾಡುವ ಉದ್ದೇಶದಿಂದ ಪರಿಷತ್ತಿನ ಸಮುದಾಯಕ್ಕೆ ನಂಬಿಕೆ ದ್ರೋಹ ಎಸೆಗಿದ್ದಾರೆ ಎಂದು ಬಸವರಾಜ್ ಆರೋಪಿಸಿದ್ದಾರೆ.