ಬೆಂಗಳೂರು, ಏ.23-ಮನೆಗಳ್ಳತನ ಮಾಡಿದ್ದ ಖತರ್ನಾಕ್ ಖದೀಮನೊಬ್ಬನನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಮಹದೇವಪುರ ಪೊಲೀಸರು 50 ಲಕ್ಷ ಮೌಲ್ಯದ 502 ಗ್ರಾಂ ಚಿನ್ನಾಭರಣ ಮತ್ತು 99.5 ಗ್ರಾಂ ಡೈಮಂಡ್ ಒಡವೆಗಳನ್ನು ಜಪ್ತಿ ಮಾಡಿದ್ದಾರೆ.
ಮಹದೇವಪುರ ದೊಡ್ಡನೆಕ್ಕುಂದಿಯ ಅಪಾರ್ಟ್‍ಮೆಂಟ್ ನ ಫ್ಲಾಟ್ ವೊಂದರಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ಕುಟುಂಬ ಸಮೇತ ಮುಂಬೈಗೆ ತೆರಳಿ ಏ.15 ರಂದು ವಾಪಸ್ ಬಂದು ನೋಡಲಾಗಿ, ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳುವಾಗಿದ್ದು, ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಕಳ್ಳತನ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ ನೀಡಿದ ದೂರು ನೀಡಿದ್ದರು.
ದೂರು ಆಧರಿಸಿ ಪ್ರಕರಣ ದಾಖಲಿಸಿದ ಮಹದೇವಪುರ ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಖದೀಮನನ್ನು ಆತನ ಸ್ವಂತ ವಿಳಾಸವನ್ನು ಪಡೆದುಕೊಂಡು, ಬಿಹಾರಕ್ಕೆ ತೆರಳಿ ವಿಚಾರಿಸಿ ಆತಆಂದ್ರಪ್ರದೇಶದ ವಿಜಯಾವಾಡದಲ್ಲಿ ಇರುವುದಾಗಿ ತಿಳಿದುಬಂದಿದೆ.
ಬಳಿಕ ವಿಶೇಷ ತಂಡವು ವಿಜಯಾವಾಡಕ್ಕೆ ಬಂದು, ವಿಜಯಾವಾಡದ ರೈಲ್ವೆ ನಿಲ್ದಾಣದ ಬಳಿ ಹುಡುಕುತ್ತಿದ್ದಾಗ ಇವರನ್ನು ನೋಡಿದ ಮನೆಯ ಕೆಲಸದವನು ಓಡಿಹೋಗುತ್ತಾನೆ. ಆತನನ್ನು ಬೆನ್ನಟ್ಟಿ ಹಿಡಿದು ವಿಚಾರಿಸಲಾಗಿ ಮನೆಗಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ.
ಆತನನ್ನು ಬಂಧಿಸಿ ಎರಡು ಬ್ಯಾಗ್‍ಗಳ ಸಮೇತ ಬೆಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರ್ಪಡಿಸಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಎರಡು ಬ್ಯಾಗನ್ನು ಪರಿಶೀಲಿಸಿದಾಗ 50 ಲಕ್ಷ ಬೆಲೆ ಬಾಳುವ 502 ಗ್ರಾಂ ಚಿನ್ನಾಭಾರಣಗಳು, 99.5 ಗ್ರಾಂ ಡೈಮಂಡ್ ಓಡವೆಗಳು, 199 ಗ್ರಾಂ ಬೆಳ್ಳಿ ನಾಣ್ಯಗಳು ಮತ್ತು ಓಡವೆಗಳು, 12000/- ನಗದು ಹಾಗೂ ಕೆಲವು ಅಮೆರಿಕನ್ ಡಾಲರ್‌ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ.
ವೈಟ್‍ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ|| ಶಿವಕುಮಾರ್,ಎಸಿಪಿ. ಕವಿತಾ.ಎಂ.ಸಿ ಅವರ ನೇತೃತ್ವದಲ್ಲಿ, ಮಹದೇವಪುರ ಪೊಲೀಸ್ ಇನ್ಸ್ ಪೆಕ್ಟರ್ ಮತ್ತವರ ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.