ಬೆಂಗಳೂರು,ಏ.24: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಮಾತ್ರವಲ್ಲ ಚಿನ್ನದ ಬೆಲೆ ಗಗನಕ್ಕೆ ಮುಟ್ಟಿದೆ. ಬಡವರು ಮಾಂಗಲ್ಯ ಮಾಡಿಸಿಕೊಳ್ಳಲೂ ಸಾಧ್ಯವಾಗದಂತಹ ಪರಿಸ್ಥಿತಿ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ವಿಶ್ವಕರ್ಮ ಸಮುದಾಯದ ಪ್ರಮುಖ ನಾಯಕ ಕೆ.ಪಿ.ನಂಜುಂಡಿ ಹಾಗೂ ಇತರೆ ನಾಯಕರನ್ನು ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, 2014 ರಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ 2800 ರೂ.ಗಳಿತ್ತು. ಈಗ 7,500 ರೂ. ಗಳಾಗಿವೆ. ಕನಿಷ್ಟ ಮಾಂಗಲ್ಯ ಮಾಡಿಸಿಕೊಳ್ಳಲೂ ಸಾಧ್ಯವಾಗದೆ ಬಡವರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ಹೇಳಿದರು.
ವಿಶ್ವಕರ್ಮ ಸಮುದಾಯದ ನಾಯಕ ನಂಜುಂಡಿಯವರು ಕಾಂಗ್ರೆಸ್ ಸೇರುತ್ತಿರುವುದೇಕೆ ಎಂಬ ಕುರಿತು ತಮ್ಮಲ್ಲಿ ಹೇಳಿಕೊಂಡಿದ್ದು, ನಮ್ಮ ಸಮುದಾಯಕ್ಕೆ ಮಾಂಗಲ್ಯ, ಮಾಂಗಲ್ಯ ಸರ ಮಾಡಿಕೊಡುವ ಅವಕಾಶವನ್ನು ದೇವರು ಕೊಟ್ಟಿದ್ದಾರೆ. ಪ್ರಸ್ತುತ ಬೆಲೆ ಏರಿಕೆಯಿಂದಾಗಿ ಮಾಂಗಲ್ಯ ಸರ ಮಾಡಿಸಿಕೊಳ್ಳಲಾಗದೆ ಸಂಕಟ ಪಡುತ್ತಿರುವ ತಾಯಂದಿರ ಗೋಳು ನೋಡಲಾಗುತ್ತಿಲ್ಲ. ಈ ವಿಷಯವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳದ ತಾವು ಪಕ್ಷದಲ್ಲಿ ಉಳಿಯಬಾರದು ಎಂದು ಕಾಂಗ್ರೆಸ್ ಸೇರುತ್ತಿರುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಸೇರಿದಂತೆ ವಿವಿಧ ಯೋಜನೆಗಳಿಂದ ತಿಂಗಳಿಗೆ 2 ಸಾವಿರ ರೂ. ಉಳಿತಾಯವಾಗುತ್ತಿದೆ. ಈಗ ತಾಯಂದಿರು ಸಣ್ಣಪುಟ್ಟ ಒಡವೆ ಖರೀದಿಗಳಿಗೆ ಮುಂದಾಗುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಇಂತಹ ಒಂದು ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ ಎಂದು ಕೆ.ಪಿ.ನಂಜುಂಡಿ ಹೇಳಿದ್ದಾಗಿ ಡಿ.ಕೆ.ಶಿವಕುಮಾರ್ ತಿಳಿಸಿದರು ನಂಜುಂಡಿ ಅವರು ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಹಿಂದುಳಿದ ವರ್ಗದಲ್ಲಿ ಅತ್ಯಂತ ಉತ್ತಮ ಸಂಘಟಕರಾಗಿದ್ದಾರೆ. ಅವರನ್ನು ಕಾಂಗ್ರೆಸ್‍ಗೆ ಮರಳಿ ಕರೆತರಬೇಕೆಂಬುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಒತ್ತಾಸೆಯಾಗಿತ್ತು. ಹೈಕಮಾಂಡ್‍ನ ಸೂಚನೆ ಮೇರೆಗೆ ತಾವು ಆರಂಭದಿಂದಲೂ ನಂಜುಂಡಿ ಅವರನ್ನು ಕಾಂಗ್ರೆಸ್‍ಗೆ ಬರುವಂತೆ ಆಹ್ವಾನ ನೀಡಿದ್ದಾಗಿ ಹೇಳಿದರು.