ಬೆಂಗಳೂರು, ಆ.12-ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಳೆದ 4 ತಿಂಗಳ ಅವಧಿಯಲ್ಲಿ 15 ಜಿಲ್ಲೆಗಳಲ್ಲಿ 33 ಸಾವಿರಕ್ಕೂ ಹೆಚ್ಚು ಮಂದಿ ಹೃದಯದ ಆರೋಗ್ಯ ಪರೀಕ್ಷೆ ನಡೆಸಲಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಹೃದಯಾಘಾತ ನಿರ್ವಹಣಾ ಯೋಜನೆಯಡಿಯಲ್ಲಿ ನಡೆದ ಹೃದಯದ ಆರೋಗ್ಯ ಪರೀಕ್ಷೆಯ ವೇಳೆ ಹೃದಯ ಸಂಬಂಧಿ ಗಂಭೀರ ಸಮಸ್ಯೆ ಹೊಂದಿದ್ದ 500ಕ್ಕೂ ಹೆಚ್ಚು ಜನರನ್ನು ಸಾವಿನ ಅಂಚಿನಿಂದ ಪಾರು ಮಾಡಲಾಗಿದೆ.
ಕಳೆದ ಎಪ್ರಿಲ್ ನಲ್ಲಿ ಆರಂಭಗೊಂಡ ಈ ಯೋಜನೆಯಡಿ 25 ಮತ್ತು 50 ವರ್ಷದೊಳಗಿನ ವ್ಯಕ್ತಿಗಳನ್ನು ಕೇಂದ್ರೀಕರಿಸಿ ನಡೆಸುವ ಪರೀಕ್ಷೆಗಳು ಸಂಭಾವ್ಯ ಹೃದಯ-ಸಂಬಂಧಿತ ದುರಂತಗಳನ್ನು ತಪ್ಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಯೋಜನೆಯು ಪ್ರಾಯೋಗಿಕ ಹಂತದಲ್ಲಿದ್ದು, ಬೆಂಗಳೂರು, ಮೈಸೂರು ಮತ್ತು ಕಲಬುರ್ಗಿ ಜಿಲ್ಲೆಯ ತಾಲ್ಲುಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಸಾಮಾನ್ಯ ಆಸ್ಪತ್ರೆಗಳು ಸೇರಿದಂತೆ 45ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳನ್ನು ಹೃದಯ ಸಂಬಂಧಿ ಕಾಯಿಲೆಯನ್ನು ತ್ವರಿತವಾಗಿ ಗುರುತಿಸಿ ತಕ್ಷಣಕ್ಕೆ ಚಿಕಿತ್ಸೆ ಆರಂಭಿಸುವ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ.
ಈ ಮೂರೂ ಕೇಂದ್ರಗಳ ವ್ಯಾಪ್ತಿಯಲ್ಲಿ ಆಯ್ಕೆ ಮಾಡಿರುವ ಆಸ್ಪತ್ತೆಗಳನ್ನು ಸುಧಾರಿತ ಕ್ಯಾಥ್ ಪ್ರಯೋಗಾಲಯ ಸೌಲಭ್ಯಗಳನ್ನು ಒದಗಿಸಿ ಸುಸಜ್ಜಿತಗೊಳಿಸಲಾಗುತ್ತದೆ.
ಸುಮಾರು 1,684 ರೋಗಿಗಳಲ್ಲಿ 520 ಹೃದಯಾಘಾತ ಪ್ರಕರಣಗಳನ್ನು ಪತ್ತೆಹಚ್ಚಲಾಗಿ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗಿದೆಹೃದಯಾಘಾತ ನಿರ್ವಹಣಾ ಯೋಜನೆಯು ಹೃದ್ರೋಗದ ವಿರುದ್ಧದ ಹೋರಾಟವನ್ನು ಸುಮಾರು 45 ತಾಲ್ಲೂಕುಗಳಲ್ಲಿ ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿದೆ ಎಂದರು.
ಹೃದಯಾಘಾತದ ಜೊತೆ ವ್ಯವಹರಿಸುವಾಗ ಸಮಯವು ತುಂಬ ಅಮೂಲ್ಯವಾಗಿದ್ದು, ಕೇವಲ 30 ನಿಮಿಷಗಳ ವಿಳಂಬವು ಸಾವಿನ ಅಪಾಯವನ್ನು ಶೇ 7ರಷ್ಟು ಹೆಚ್ಚಿಸಬಹುದು. ಹೃದಯಾಘಾತ ನಿರ್ವಹಣೆ ಯೋಜನೆಯು ಈ ಸವಾಲನ್ನು ಎದುರಿಸುವ ನಮ್ಮ ಪ್ರತಿಕ್ರಿಯೆಯಾಗಿದೆ ಎಂದು ತಿಳಿಸಿದರು