ಬೆಂಗಳೂರು,ಮೇ1-
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ದೇಶಾದ್ಯಂತ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಆಪ್ತ ಹಾಗೂ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಮಹಿಳೆಯೊಬ್ಬರ ಜತೆಗಿನ ವಾಟ್ಸ್‌ಆ್ಯಪ್ ಕಾಲ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರಾಮನಗರ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯೂ ಆಗಿರುವ ಮಹಿಳೆ ಜತೆ ಹುಸೇನ್ ಅವರು, ಆಪ್ತವಾಗಿ ಮಾತನಾಡುತ್ತಿರುವ 2 ನಿಮಿಷ 27 ಸೆಕೆಂಡ್‌ನ ವಿಡಿಯೊ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದರ ಬೆನ್ನಲ್ಲೇ ಅದೇ ಮಹಿಳೆ ರಾಮನಗರ ಜಿಲ್ಲೆಯ ವಿವಿಧ ರಾಜಕಾರಣಿಗಳ ಜೊತೆ ಆಪ್ತವಾಗಿ ಮಾತನಾಡಿರುವ ವಿಡಿಯೋ ದೃಶ್ಯಾವಳಿಗಳು ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸ ಒದಗಿಸಿದೆ.
ಇದರ ನಡುವೆ ತಮ್ಮ ವಿಡಿಯೋ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ, ಶಾಸಕ ಇಕ್ಬಾಲ್ ಹುಸೇನ್, ‘ನಾನೇ ಮಾತನಾಡಿರುವ ವಿಡಿಯೊ ಇರಬಹುದು. ನಾನು ಗೆದ್ದಿರುವುದಕ್ಕೆ ಎದುರಾಳಿಗಳು ಈ ರೀತಿಯ ವಿಡಿಯೊ ಹರಿಬಿಟ್ಟಿದ್ದಾರೆ. ಇಂತಹವೆಲ್ಲಾ ಬರುತ್ತಿರುತ್ತವೆ. ಅದರಲ್ಲಿರುವ ಸತ್ಯಾಂಶವೇನು ಎಂದು ನೋಡುವೆ. ಎಂದು ಹೇಳಿದ್ದಾರೆ.
ವಿಡಿಯೋದಲ್ಲಿರುವುದು ತಾವೇ ಎಂದು ಒಪ್ಪಿಕೊಂಡ ಶಾಸಕ ಇಕ್ಬಾಲ್ ಹುಸೈನ್, ಯಾರದೋ ಮೇಲಿನ ಕೋಪಕ್ಕೆ ನನ್ನನ್ನು ಬಲಿಪಶು ಮಾಡಲಾಗುತ್ತಿದೆ ಶಾಸಕರಾದ ನಮಗೆ ಸಮಸ್ಯೆಗಳನ್ನು ಹೇಳಿಕೊಂಡು ಹಲವಾರು ಮಂದಿ ಕರೆ ಮಾಡುತ್ತಾರೆ ಇದು ಅದೇ ರೀತಿಯ ಕರೆಯಾಗಿದೆ ಸುಮಾರು ಒಂದು ವರೆ ವರ್ಷದ ಹಿಂದೆ ನಡೆದ ಈ ಘಟನೆಯನ್ನು ಈಗ ಜಾಲತಾಣಗಳಲ್ಲಿ ಹರಿಯ ಬಿಟ್ಟು ನನ್ನ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು
ಡಿಕೆ ಸುರೇಶ ಸ್ಪಷ್ಟನೆ:
ಈ ನಡುವೆ ಹೇಳಿಕೆ ನೀಡಿರುವ ಸಂಸದ ಡಿ.ಕೆ.ಸುರೇಶ್ ರಾಮನಗರದ ಶಾಸಕರಿಗೆ ಸೇರಿದ್ದು ಎಂದು ಹೇಳಲಾದ ವಿಡಿಯೋ ಪ್ರಕರಣದಲ್ಲಿ ಸಂತ್ರಸ್ತೆ ದೂರು ನೀಡಿದರೆ ಕ್ರಮ ಕೈಗೊಳ್ಳಲು ಸೂಚನೆ ನೀಡುವುದಾಗಿ ಹೇಳಿದ್ದಾರೆ.
ಜಾಲತಾಣಗಳಲ್ಲಿ ಇಂತಹ 108 ವಿಡಿಯೋಗಳಿರುತ್ತವೆ, ಎಲ್ಲರದೂ ಇರುತ್ತವೆ, ಸಿಡಿ ಬಾಯ್ಸ್ ಗೆ ಸೇರಿದ ವಿಡಿಯೋಗಳಿಲ್ಲವೇ? ಎಂದು ಪ್ರಶ್ನಿಸಿದರು.
ಇಂತಹ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ವಿಶೇಷ ಕಾನೂನಿನ ಅಗತ್ಯವಿದೆ. ಬ್ಲಾಕ್‌ಮೇಲ್ ಮಾಡುವುದು, ಖಾಸಗಿ ಬದುಕಿಗೆ ಧಕ್ಕೆ ತರುವುದು, ಅಧಿಕಾರ ದುರುಪಯೋಗ ಸೇರಿದಂತೆ ಹಲವು ವಿಚಾರಗಳನ್ನೊಳಗೊಂಡಂತೆ ಕ್ರಮ ಕೈಗೊಳ್ಳಲು ಕಾನೂನಿನ ಅಗತ್ಯವಿದೆ ಎಂದು ಒತ್ತಾಯಿಸಿದರು.
Previous Articleರಾಜ್ಯದ ಖಜಾನೆ ಖಾಲಿ ಅಂತೆ.
Next Article ಪ್ರಜ್ವಲ್ ರೇವಣ್ಣನನ್ನು ಏಕಾಏಕಿ ಬಂಧಿಸುವುದಿಲ್ಲವಂತೆ.