ಬೆಂಗಳೂರು,ಜ.6-
ರಾಜ್ಯ ಕಾಂಗ್ರೆಸ್ಸಿನಲ್ಲಿ ಮತ್ತೊಮ್ಮೆ ವಿದ್ಯಮಾನಗಳು ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗಾಗಿ ಆಗ್ರಹ ತೀವ್ರಗೊಂಡಿದೆ
ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಯಾವುದೇ ಮಾರ್ಪಾಡು ಮಾಡದಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಖ್ಯಮಂತ್ರಿ ಆಪ್ತವಲಯ ತೀರ್ಮಾನಿಸಿದೆ.
ಮತ್ತೊಂದಡೆಯಲ್ಲಿ ವಿದೇಶ ಪ್ರವಾಸದಿಂದ ಆಗಮಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೆ ಮಂತ್ರಿ ಸತೀಶ್ ಜಾರಕಿಹೊಳಿ ತಾವು ಈಗ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಅಲ್ಲ 2028ರಲ್ಲಿ ಈ ಹುದ್ದೆಗಾಗಿ ಪೈಪೋಟಿ ನಡೆಸುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಳೆದ ವಾರ ಮಂತ್ರಿ ಸತೀಶ ಜಾರಕಿಹೊಳಿ ಮತ್ತು ಬೈರತಿ ಸುರೇಶ್ ಹಾಗೂ ಕೆಎನ್ ರಾಜಣ್ಣ ನಿವಾಸದಲ್ಲಿ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದ ಮಂತ್ರಿಗಳು ಇದೀಗ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ವಿಷಯಗಳಿಗಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ.
ಮಂತ್ರಿಗಳಾದ ಡಾ. ಎಚ್ಎಸ್‌ಸಿ ಮಹದೇವಪ್ಪ, ಸತೀಶ್ ಜಾರಕಿಹೊಳಿ ಮತ್ತು ಕೆಎನ್ ರಾಜಣ್ಣ ಅವರು ಈ ವಾರದಲ್ಲಿಯೇ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ.
ಹೈಕಮಾಂಡ್ ಬೇಟಿಯ ಸಮಯದಲ್ಲಿ ಈ ನಾಯಕರು, ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಯಾವುದೇ ಕಾರಣಕ್ಕೂ
ಬದಲಾಯಿಸಬಾರದು
ಒಂದೊಮ್ಮೆ ಬದಲಾಯಿಸುವುದಾದರೆ ಸಿದ್ದರಾಮಯ್ಯ ಅವರೂ ಒಪ್ಪುವ, ಸರ್ವಸಮ್ಮತ ವ್ಯಕ್ತಿಗೆ ಆ ಸ್ಥಾನ ನೀಡಬೇಕು.
ಜಾತಿವಾರು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಬೇಕು ಎಂಬ ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ತಪ್ಪೇನಿಲ್ಲ:
ಈ ನಡುವೆ ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂತ್ರಿಗಳು ಒಟ್ಟಾಗಿ ಕುಳಿತು ಔತಣಕೂಟ ನಡೆಸಿದರೆ ತಪ್ಪೇನು ಇದರಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದು ಹೇಳಿದ್ದಾರೆ.
ತಾವು ಸೇರಿದಂತೆ ಕೆಲವು ಮಂತ್ರಿಗಳು ಹೊಸ ವರ್ಷದ ಹಿನ್ನೆಲೆಯಲ್ಲಿ ವಿದೇಶ ಪ್ರವಾಸ ಕೈಗೊಂಡಿದ್ದೆವು ಬೆಂಗಳೂರಿನಲ್ಲಿ ಇದ್ದ ಮಂತ್ರಿಗಳು ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಒಟ್ಟಾಗಿ ಕುಳಿತು ಊಟ ಮಾಡಿದ್ದಾರೆ ನಾನು ಕೂಡ ಬೆಂಗಳೂರಿನಲ್ಲಿ ಇದ್ದರೆ ಅದಕ್ಕೆ ಹೋಗುತ್ತಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ, ಮಂತ್ರಿ ಮಂಡಲ ವಿಸ್ತರಣೆ ಕುರಿತು ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಈ ಬಗ್ಗೆ ಏನಾದರೂ ತೀರ್ಮಾನ ತೆಗೆದುಕೊಳ್ಳುವುದು ಇದ್ದರೆ ಅದನ್ನು ಮುಖ್ಯಮಂತ್ರಿ ಮತ್ತು ಹೈಕಮಾಂಡ್ ನಾಯಕರು ಒಟ್ಟಾಗಿ ಕುಳಿತು ತೀರ್ಮಾನಿಸುತ್ತಾರೆ ಇದು ಅವರ ಪರಮಾಧಿಕಾರ ಎಂದು ಹೇಳಿದರು.
ಮಂತ್ರಿಮಂಡಲ ವಿಸ್ತರಣೆ ನಾಯಕತ್ವ ಬದಲಾವಣೆ ಕುರಿತಂತೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಸಂಪೂರ್ಣ ಕಪೋಲ ಕಲ್ಪಿತ ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು
ನಾನೇ ಸಿಎಂ:
ಈ ನಡುವೆ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ, ಬೆಂಗಳೂರಿನ ತಮ್ಮ ನಿವಾಸದಲ್ಲಿ ನಡೆದ ಭೋಜನಕೂಟದಲ್ಲಿ ಯಾವುದೇ ರೀತಿಯ ರಾಜಕೀಯ ತೀರ್ಮಾನಗಳು ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮಂತ್ರಿಮಂಡಲ ವಿಸ್ತರಣೆ ಸೇರಿದಂತೆ ಯಾವುದೇ ತೀರ್ಮಾನ ಇದ್ದರೂ ಅದನ್ನು ಮುಖ್ಯಮಂತ್ರಿ ಮತ್ತು ಹೈಕಮಾಂಡ್ ತೆಗೆದುಕೊಳ್ಳಲಿದೆ ತಾವು ಈಗ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿ ಇಲ್ಲ ಆದರೆ 2028 ರಲ್ಲಿ ಇದಕ್ಕಾಗಿ ಪೈಪೋಟಿ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಕುರಿತಂತೆ ನಾವು ಏನು ಹೇಳಬೇಕು ಎಂಬುದನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ ಸೂಕ್ತ ಸಮಯದಲ್ಲಿ ಈ ಬಗ್ಗೆ ವರಿಷ್ಠರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
Previous Articleಕಾಡುಗಳ್ಳ ವೀರಪ್ಪನ್ ಅಡಗುದಾಣ ನೋಡಬೇಕಾ..
Next Article ಚೀನಾ ವೈರಸ್ ಸೃಷ್ಟಿಸಿದ ಆತಂಕ.