ಬೆಂಗಳೂರು – ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಭರ್ಜರಿ ರಂಗು ಬಂದಿದೆ.ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಚಳ್ಳಕೆರೆ ಹೊರತುಪಡಿಸಿ ಉಳಿದೆಲ್ಲಾ ಕಡೆ ಕಮಲ ಅರಳಿತ್ತು.
ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆಯ ಈ ಬದಲಾವಣೆ ರಾಜ್ಯದ 25 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪರಿಣಾಮ ಬೀರಿತ್ತು.
ಪ್ರಮುಖವಾಗಿ ಕೋಟೆನಾಡಿಗೆ ಹೊಂದಿಕೊಂಡ ಮಧುಗಿರಿ, ಶಿರಾ,ಚಿಕ್ಕನಾಯಕನಹಳ್ಳಿ, ತುಮಕೂರು, ಚನ್ನಗಿರಿ, ಮಾಯಕೊಂಡ,ಪಾವಗಡ ಸೇರಿದಂತೆ 25 ಕ್ಷೇತ್ರಗಳಲ್ಲಿ ಯಾದವ ಸಮುದಾಯದ ಮತದಾರರು ನಿರ್ಣಾಯಕ ಪಾತ್ರವಹಿಸುತ್ತಾರೆ.
ಬಹು ಕಾಲದಿಂದ ಈ ಸಮುದಾಯ ಕಾಂಗ್ರೆಸ್ ಮತ ಬ್ಯಾಂಕ್ ಆಗಿತ್ತು. ಅದಕ್ಕೆ ಪ್ರಮುಖ ಕಾರಣ ಈ ಸಮುದಾಯದ ಪ್ರಮುಖ ನಾಯಕ ವರ್ತೂರು ಕೃಷ್ಣಪ್ಪ ಸೇರಿದಂತೆ ಹಲವರು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು.
ಕಾಂಗ್ರೆಸ್ ನಿಂದ ಹೊರ ನಡೆದ ಅವರು ವಿಧಿವಶರಾದ ಬಳಿಕ ಅವರ ಮಗಳು ಪೂರ್ಣಿಮಾ ಶ್ರೀನಿವಾಸ್ ಈ ಸಮುದಾಯದ ಪ್ರಮುಖ ನಾಯಕರಾದರು.ಇವರಿಗೆ ಕಾಂಗ್ರೆಸ್ ವಿಧಾನಸಭೆ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಅವರು ಬಿಜೆಪಿ ಸೇರಿದ್ದರು ಇದರಿಂದ ಆ ಸಮುದಾಯ ಬಿಜೆಪಿಗೆ ಒಲಿದಿತ್ತು.
ಈ ಬಗ್ಗೆ ಸಾಕಷ್ಟು ಮಾಹಿತಿಯಿರುವ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೀಗ ಈ ಸಮುದಾಯಕ್ಕೆ ಸೇರಿದ ಪೂರ್ಣಿಮಾ ಅವರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಪ್ರಯತ್ನ ನಡೆಸಿದ್ದಾರೆ ಅಲ್ಲದೆ ದಿವಂಗತ ಕೃಷ್ಣಪ್ಪ ಅವರೊಂದಿಗೆ ಖರ್ಗೆ ಉತ್ತಮ ಒಡನಾಟ ಹೊಂದಿದ್ದರು. ಖರ್ಗೆ ಅವರ ಆಪ್ತ ವಲಯದಲ್ಲಿ ಕೃಷ್ಣಪ್ಪ ಗುರುತಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಕಳೆದ ಚುನಾವಣೆ ಸಮಯದಲ್ಲೇ ಖರ್ಗೆ ಪೂರ್ಣಿಮಾ ಅವರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದರು.ಆದರೆ ಈ ಪ್ರಕ್ರಿಯೆ ಅಂತಿಮ ಹಂತ ತಲುಪುವ ಮುನ್ನವೇ ಅವರು ಬಿಜೆಪಿ ಸೇರಿದ್ದರು.
ಇದೀಗ ಮತ್ತೆ ಖರ್ಗೆ ಅವರೇ ಈ ವಿಷಯವಾಗಿ ಹೆಚ್ಚು ಆಸಕ್ತಿವಹಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪೂರ್ಣಿಮಾ ಮತ್ತು ಅವರ ಪತಿ ಶ್ರೀನಿವಾಸ್ ಜೊತೆ ಮಾತುಕತೆ ನಡೆಸಿದರು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸ್ಥಿತಿಯಲ್ಲಿ ಇಲ್ಲ.ಅಲ್ಲದೆ ಆ ಪಕ್ಷದಲ್ಲಿ ಪೂರ್ಣಿಮಾ ಅವರಿಗೆ ಉನ್ನತ ಸ್ಥಾನ ಸಿಗುವುದಿಲ್ಲ. ಅದರೆ ಕಾಂಗ್ರೆಸ್ ನಲ್ಲಿ ಹೀಗಾಗುವುದಿಲ್ಲ.ಇಲ್ಲಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಮಾನ್ಯತೆ ಇದೆ ತಮ್ಮ ತಂದೆ ಕಾಂಗ್ರೆಸ್ ನಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದರು. ಅಲ್ಲದೆ ತಾವು ಕೆಪಿಸಿಸಿ ಅಧ್ಯಕ್ಷರಾಗಿದ್ದ ವೇಳೆ ತಮಗೆ ಬಿಬಿಎಂಪಿ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಿ ಗೆಲ್ಲಿಸಲಾಗಿತ್ತು.ಕಾಂಗ್ರೆಸ್ ನಲ್ಲಿ ತಮಗೆ ಸಾಕಷ್ಟು ಗೌರವ ನೀಡಲಾಗಿತ್ತು ಎಂಬುದನ್ನು ಗಮನಕ್ಕೆ ತಂದರು ಎನ್ನಲಾಗಿದೆ.
ಖರ್ಗೆ ಅವರ ಬಗ್ಗೆ ಮೊದಲಿನಿಂದಲೂ ಪೂರ್ಣಿಮಾ ಅವರಿಗೆ ಗೌರವದ ಭಾವನೆಯಿದ್ದು,ಅವರು ಪಕ್ಷ ಸೇರುವಂತೆ ಮಾಡಿದ ಸಲಹೆಗೆ ಆ ಕ್ಷಣವೇ ಸಮ್ಮತಿ ವ್ಯಕ್ತಪಡಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ
ಈ ನಡುವೆ ಚುನಾವಣೆಗೆ ಸ್ಪರ್ಧೆ ಮಾಡುವ ವಿಷಯವಾಗಿ ಪೂರ್ಣಿಮಾ ಅವರ ಕುಟುಂಬದಲ್ಲೂ ಗೊಂದಲ ಉಂಟಾಗಿತ್ತು. ಈ ಬಾರಿ ಪೂರ್ಣಿಮಾ ಅವರ ಬದಲಾಗಿ ಅವರ ಪತಿ ಶ್ರೀನಿವಾಸ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ದತೆ ನಡೆಸಿದ್ದರು ಇದು ಅವರ ಕುಟುಂಬದಲ್ಲಿ ಗೊಂದಲಕ್ಕೂ ಕಾರಣವಾಗಿತ್ತು ಎನ್ನಲಾಗಿದೆ.
ಈ ವಿಷಯವಾಗಿಯೂ ಖರ್ಗೆ ಅವರೆ ರಾಜಿ ಸಂಧಾನ ನಡೆಸಿದರು ಎನ್ನಲಾಗಿದೆ. ವಿಧಾನಸಭೆ ಚುನಾವಣೆಗೆ ಪೂರ್ಣಿಮಾ ಬದಲಾಗಿ ಶ್ರೀನಿವಾಸ್ ಸ್ಪರ್ಧೆ ಮಾಡಿದರೆ ಸಮುದಾಯದ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲ ಎಂಬ ಸಮೀಕ್ಷಾ ವರದಿಗಳನ್ನು ಗಮನಕ್ಕೆ ತಂದ ಅವರು ಶ್ರೀನಿವಾಸ್ ಅವರಿಗೆ ವಿಮಾನ ಪರಿಷತ್ ಇಲ್ಲವೇ ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಯವಂತೆ ಸಲಹೆ ಮಾಡುವ ಮೂಲಕ ಗೊಂದಲ ಬಗೆಹರಿಸಿದರೆನ್ನಲಾಗಿದೆ.
ಇದರೊಂದಿಗೆ ಇದೀಗ ಪೂರ್ಣಿಮಾ ಹಿರಿಯೂರು ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಈ ನಡುವೆ ಈ ಬೆಳವಣಿಗೆಗೆ ತೀವ್ರ ಆತಂಕ ವ್ಯಕ್ತಪಡಿಸಿ ಪಕ್ಷ ತೊರೆಯುವ ಬೆದರಿಕೆ ಹಾಕಿದ ಸೋಮಶೇಖರ್ ಅವರೊಂದಿಗೂ ಖರ್ಗೆ ಮಾತುಕತೆ ನಡೆಸಿ ಪೂರ್ಣಿಮಾ ಪರವಾಗಿ ಕೆಲಸ ಮಾಡಲು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಈ ಕ್ಷೇತ್ರದಿಂದ ಈ ಹಿಂದೆ ಆಯ್ಕೆಯಾಗಿದ್ದ ಮಾಜಿ ಸಚಿವ ಡಿ.ಸುಧಾಕರ್ ಪೂರ್ಣಿಮಾ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಜೆಡಿಎಸ್ ಸೇರಲು ಸಜ್ಜಾಗಿದ್ದರೆನ್ನಲಾಗಿದೆ.ಖರ್ಗೆ ಅವರ ಸೂಚನೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಧಾನ ನಡೆಸಿದ್ದಾರೆ. ಡಿ.ಸುಧಾಕರ್ ಅವರು ಶಿವಕುಮಾರ್ ಅವರ ಆಪ್ತರಾಗಿದ್ದು ಅವರೊಂದಿಗೆ ಮಾತನಾಡಿದ ಶಿವಕುಮಾರ್ ಹಿರಿಯೂರು ಕ್ಷೇತ್ರದಿಂದ ಮಾಜಿ ಸಚಿವ ರೇವಣ್ಣ ಅವರ ಆಪ್ತ ನಿವೃತ್ತ ಮುಖ್ಯ ಇಂಜಿನಿಯರ್ ರವೀಂದ್ರಪ್ಪ ಜೆಡಿಎಸ್ ಅಭ್ಯರ್ಥಿ ಈಗಾಗಲೇ ಈ ವಿಷಯ ಅಂತಿಮಗೊಂಡಿದೆ.ಇದನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ ನಲ್ಲಿ ಮುಂದುವರೆಯುವುದು ಸೂಕ್ತ ವಿಧಾನಸಭೆ ಚುನಾವಣೆಗೆ ತಾವು ಸ್ಪರ್ಧಿಸಲೇ ಬೇಕು ಎನ್ನುವಂತಿದ್ದರೆ, ನೆರೆಯ ಚಿತ್ರದುರ್ಗ ಕ್ಷೇತ್ರದಿಂದ ಕಣಕ್ಕಿಳಿಯಬಹುದು ಎಂದು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಡಿ.ಸುಧಾಕರ್ ಪಕ್ಷದ ಅಧ್ಯಕ್ಷ ಶಿವಕುಮಾರ್ ಮಾಡಿದ ಸಲಹೆಗೆ ಬಹುತೇಕ ಸಮ್ಮತಿಸಿದ್ದಾರೆ ಎನ್ನಲಾಗಿದೆ ಆದರೂ ಈ ವಿಷಯವಾಗಿ ತಮ್ಮ ಬೆಂಬಲಿಗರು ಮತ್ತು ಆಪ್ತರೊಂದಿಗೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.