ಬೆಂಗಳೂರು,ಮಾ.18- ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಪಣತೊಟ್ಟು ಶ್ರಮಿಸುತ್ತಿರುವ ಕಾಂಗ್ರೆಸ್ ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಳ್ಳುತ್ತಿರುವಂತೆ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿರುವ ಪ್ರತಿಪಕ್ಷವನಾಯಕ ಸಿದ್ದರಾಮಯ್ಯ ಅವರ ಸ್ಥಿತಿ ಅತಂತ್ರವಾಗಿದೆ.
ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಾರಾ ಅಥವಾ ಇಲ್ಲವಾ..ಸ್ಪರ್ಧಿಸಿದರೂ ಎಲ್ಲಿಂದ ಸ್ಪರ್ಧೆ ಎಂಬ ಬಗ್ಗೆ ಖಚಿತತೆ ಇಲ್ಲದೆ ಎಲ್ಲವೂ ಗೊಂದಲ, ಗೋಜಲಾಗಿ ಪರಿಣಮಿಸಿದೆ.
ತಮ್ಮ ಸ್ವ ಕ್ಷೇತ್ರ ವರುಣಾ ಬಿಟ್ಟು ಬೇರೆ ಕಡೆ ಸ್ಪರ್ಧಿಸಿದರೆ ಅವರ ಗೆಲುವು ಕಷ್ಟ ಎಂಬ ವರದಿಗಳು ಹೈಕಮಾಂಡ್ ಅನ್ನು ತಲುಪಿವೆ
ಈ ಬಾರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಅಲ್ಲಿ ಗೆಲುವಿನ ಸಾಧ್ಯತೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಖುದ್ದು ಹೈಕಮಾಂಡ್ ಸುರಕ್ಷಿತ ಕ್ಷೇತ್ರ ಆಯ್ದುಕೊಳ್ಳುವಂತೆ ಸಲಹೆ ನೀಡಿದೆ ಎನ್ನಲಾಗಿದೆ.
ಕಾಂಗ್ರೆಸ್ ವತಿಯಿಂದ ನಡೆಸಿರುವ ಎರಡು ಬಾರಿಯ ಸಮೀಕ್ಷೆ ಮತ್ತು ಹೈಕಮಾಂಡ್ ಸಂಗ್ರಹಿಸಿರುವ ಮಾಹಿತಿ ಪ್ರಕಾರ ಕೋಲಾರ ಸಿದ್ದರಾಮಯ್ಯ ಅವರಿಗೆ ಸುರಕ್ಷಿತ ಕ್ಷೇತ್ರವಲ್ಲ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಯಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಸುರಕ್ಷಿತ ಕ್ಷೇತ್ರ ಆರಿಸಿಕೊಳ್ಳುವಂತೆ ಅಥವಾ ಈ ಬಾರಿ ಚುನಾವಣೆಯಲ್ಲಿ ಸ್ರ್ಪಧಿಸದೆ ಹಿಂದೆ ಸರಿಯುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ, ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಬಹುದು. ಒಂದು ವೇಳೆ ಸ್ಪರ್ಧೆ ಮಾಡಲೇಬೇಕು ಎಂದಾದರೆ ಸುರಕ್ಷಿತ ಕ್ಷೇತ್ರ ಆರಿಸಿಕೊಳ್ಳಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ರಾಹುಲ್ ಗಾಂಧಿ ಇಂತಹ ಸಲಹೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಬೆಂಬಲಿಗರು ಮತ್ತು ಪ್ರಮುಖರೊಂದಿಗೆ ಸಭೆ ನಡೆಸಿದರು. ಹೈಕಮಾಂಡ್ ನೀಡಿರುವ ಸಲಹೆಯ ಬಗ್ಗೆ ಮಾಹಿತಿ ನೀಡಿದರು.ಈ ಸಭೆಯಲ್ಲಿ ಕೆಲವರು ಸ್ಪರ್ಧೆ ಮಾಡುವ ಬದಲಿಗೆ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವುದು ಸೂಕ್ತ ಎಂದು ಹೇಳಿದರೆ ಮತ್ತೆ ಕೆಲವರು ಸ್ಪರ್ಧೆ ಮಾಡದೆ ಹೋದರೆ, ಪಕ್ಷ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಹುದ್ದೆಗೆ ಬಾರಿ ಪೈಪೋಟಿ ಮಾಡಬೇಕಾಗುತ್ತದೆ. ಜೊತೆಗೆ ಸ್ಪರ್ಧೆ ಇಲ್ಲ ಎಂದರೆ ಸಿದ್ದರಾಮಯ್ಯ ಸಿಎಂ ಆಗುವುದಿಲ್ಲ ಎಂದು ಅಪ ಪ್ರಚಾರ ಮಾಡಲಾಗುತ್ತದೆ ಇದು ಪಕ್ಷಕ್ಕೆ ಹಿನ್ನಡೆಯಾಗಲಿದೆ ಹೀಗಾಗಿ ಸ್ಪರ್ಧೆ ಮಾಡಲೇಬೇಕು ಎಂದು ಪ್ರಬಲವಾಗಿ ವಾದ ಮಂಡಿಸಿದರೆನ್ನಲಾಗಿದೆ
ಇದರಿಂದಾಗಿ ಸಿದ್ದರಾಮಯ್ಯ ಮತ್ತೆ ವರುಣಾದಿಂದಲೇ ಸ್ರ್ಪಧಿಸುವ ಚಿಂತನೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮುಂದಿನ ವಾತ ದೆಹಲಿಯಲ್ಲಿ ಚುನಾವಣೆ ಸಮಿತಿ ಸಭೆ ನಡೆಯುತ್ತಿದ್ದು ಅದರಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎನ್ನಲಾಗಿದೆ.