ಬೆಂಗಳೂರು,ಜ.9:
ರಾಜ್ಯ ಕಾಂಗ್ರೆಸ್ಸಿನಲ್ಲಿ ಬಿರುಸಿನ ವಿದ್ಯಮಾನಗಳು ನಡೆಯುತ್ತಿದ್ದು ಜನವರಿ 14ರಂದು ವರಿಷ್ಠರ ಭೇಟಿಗಾಗಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡು ದೆಹಲಿಗೆ ತೆರಳುತ್ತಿದೆ.
ಇದರ ನಡುವೆ ಜನವರಿ 13ರಂದು ಕರೆದಿರುವ ಶಾಸಕಾಂಗ ಪಕ್ಷದ ಸಭೆ ಕುತೂಹಲ ಮೂಡಿಸಿದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶತ್ರು ಸಂಹಾರಕ್ಕೆ ಹೆಸರಾದ ತಮಿಳುನಾಡಿನ ಪ್ರತ್ಯಂಗಿರಾ ದೇವಿಯ ಆರಾಧನೆಯಲ್ಲಿ ತೊಡಗಿರುವುದು ವಿದ್ಯಮಾನಗಳಿಗೆ ರಂಗೇರುವಂತೆ ಮಾಡಿದೆ.
ನಾಯಕತ್ವ ಬದಲಾವಣೆ ಮತ್ತು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯ ಸೃಷ್ಟಿಯ ಬೇಡಿಕೆ ಏಕಾಏಕಿ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಮಂತ್ರಿಗಳ ಔತಣ ಕೂಟ ಸಭೆಗಳು ನಡೆದಿದ್ದವು ಇಂತಹ ಸಭೆಗಳಿಂದ ಪಕ್ಷದಲ್ಲಿ ಗೊಂದಲ ಉಂಟಾಗಲಿದೆ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವರಿಷ್ಠರ ಗಮನ ಸೆಳೆದಿದ್ದರು ಇದನ್ನು ಪರಿಗಣಿಸಿದ ಹೈಕಮಾಂಡ್ ಔತಣಕೂಟ ಸಭೆಗಳಿಗೆ ಬ್ರೇಕ್ ಹಾಕಿದೆ.
ತಮ್ಮ ಸಭೆಗೆ ಹೈಕಮಾಂಡ್ ಬ್ರೇಕ್ ಹಾಕಿದ ಬೆನ್ನಲ್ಲೇ ಶಿವಕುಮಾರ್ ಅವರ ವಿರುದ್ಧ ಮಂತ್ರಿಗಳಾದ ಪರಮೇಶ್ವರ ಕೆ ಎನ್ ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ನಡುವೆ ಗಾಂಧಿ ನಡಿಗೆ ಕಾರ್ಯಕ್ರಮದ ಕುರಿತು ಚರ್ಚಿಸುವ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 13ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಇದಾದ ಬಳಿಕ ನವೀಕರಣಗೊಂಡ ಎಐಸಿಸಿ ಕಚೇರಿ ಉದ್ಘಾಟನೆಗಾಗಿ ದೆಹಲಿಗೆ ತೆರಳುತ್ತಿದ್ದು ವಿದ್ಯಮಾನಗಳ ಬಗ್ಗೆ ಕುತೂಹಲ ಮೂಡಿಸಿದೆ.
ಜನವರಿ 15ರಂದು ಎಐಸಿಸಿ ಕಚೇರಿ ಉದ್ಘಾಟನೆ ನಡೆಯಲಿದೆ ಅದಕ್ಕೂ ಒಂದು ದಿನ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೃಹ ಮಂತ್ರಿ ಪರಮೇಶ್ವರ್ ಕೈಗಾರಿಕೆ ಮಂತ್ರಿ ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ದೆಹಲಿಗೆ ತೆರಳುತ್ತಿದ್ದಾರೆ ಈ ವೇಳೆ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳ ನೇಮಕಾತಿ ಸಂಪುಟ ವಿಸ್ತರಣೆ ಹಾಗೂ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತಂತೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಸುಧೀರ್ಘ ಅವಧಿಗೆ ಈ ಹುದ್ದೆಯನ್ನು ನಿಭಾಯಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಬದಲಾಯಿಸಬೇಕು ಎಂಬ ಆಗ್ರಹ ಕೇಳಿ ಬಂದಿದ್ದು ಅದರ ಕುರಿತಾಗಿಯೂ ಹೈಕಮಾಂಡ್ ಜೊತೆ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಶೇಷ ಪೂಜೆ; ಇಂತಹ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಬೆಳಿಗ್ಗೆ ತಮಿಳುನಾಡಿನ ಕುಂಭಕೋಣಂಗೆ ತೆರಳಿ ಪ್ರತ್ಯಂಗಿರ ಹೋಮದಲ್ಲಿ ಭಾಗಿಯಾಗಿದ್ದಾರೆ. ಹೆಲಿಕಾಫ್ಟರ್‌ನಲ್ಲಿ ಪತ್ನಿ ಉಷಾ ಅವರೊಂದಿಗೆ ತೆರಳಿದ ಡಿ.ಕೆ.ಶಿವಕುಮಾರ್ ಶ್ರೀ ಮಹಾ ಪ್ರತ್ಯಂಗಿರ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಹೋಮ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ವೈಕುಂಠ ಏಕಾದಶಿಗೂ ಮುನ್ನ ಡಿ.ಕೆ.ಶಿವಕುಮಾರ್ ದೇವಸ್ಥಾನಗಳ ದರ್ಶನಕ್ಕೆ ತೆರಳಿರುವುದು ಕುತೂಹಲ ಕೆರಳಿಸಿದೆ.
ಪ್ರತ್ಯಂಗಿರಾ ದೇವಿ ಶತ್ರು ಸಂಹಾರಕ್ಕೆ ಹೆಸರಾದ ದೇವಿ ಎಂಬ ಪ್ರತೀತಿಯಿದೆ. ಹೀಗೆ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತ ಅವರು ರಾಜಕೀಯವಾಗಿ ತೀವ್ರ ಸಂಕಷ್ಟದಲ್ಲಿದ್ದ ಸಮಯದಲ್ಲಿ ನಿರಂತರವಾಗಿ ಪ್ರತ್ಯಂಗಿರಾ ದೇವಿಯ ಆರಾಧನೆಯಲ್ಲಿ ತೊಡಗಿದ ಪರಿಣಾಮ ಅವರು ಮತ್ತೆ ರಾಜಕೀಯವಾಗಿ ಹೆಚ್ಚಿನ ಪ್ರವರ್ಧಮಾನಕ್ಕೆ ಬಂದಿದ್ದರು ಸತತವಾಗಿ ಎರಡು ಬಾರಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದರು ಎಂದು ಹೇಳಲಾಗುತ್ತಿದೆ.
ಪ್ರತ್ಯಂಗಿರಾ ದೇವಿಯ ಆರಾಧನೆಯಿಂದ ಜಯಲಲಿತಾ ಅವರಿಗೆ ರಾಜಕೀಯವಾಗಿ ಸಾಕಷ್ಟು ಲಾಭ ಉಂಟಾಗಿತ್ತು ಎಂಬ ಮಾತುಗಳ ಹಿನ್ನೆಲೆಯಲ್ಲಿ ಪ್ರಮುಖ ರಾಜಕಾರಣಿಗಳು ಇದೀಗ ಪ್ರತ್ಯಂಗಿರಾ ದೇವಿಯ ಆರಾಧನೆಯಲ್ಲಿ ತೊಡಗುತ್ತಿದ್ದಾರೆ ಈ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಕೂಡ ತಮ್ಮ ಪತ್ನಿ ಜೊತೆ ಅಲ್ಲಿಗೆ ತೆರಳಿ ವಿಶೇಷ ಪೂಜೆ ನೆರವೇರಿಸುತ್ತಿರುವುದು ಕುತೂಹಲ ಮೂಡಿಸಿದೆ
Previous Articleಬಿಜೆಪಿಯಲ್ಲೂ ಡಿನ್ನರ್ ಪಾಲಿಟಿಕ್ಸ್.
Next Article ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.