ಬೆಂಗಳೂರು,ಫೆ.10-
ಕರ್ನಾಟಕ ಬಿಜೆಪಿಯಲ್ಲಿ ಹೊಗೆಯಾಡುತ್ತಿರುವ
ಬಣ ಬಡಿದಾಟ, ಆಂತರಿಕ ಕಚ್ಚಾಟ, ರಾಜ್ಯಾಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗಮನ ಹರಿಸಲು ಹೈಕಮಾಂಡ್ ಮುಂದಾಗಿದೆ.
ಕಳೆದ ಕೆಲವಾರು ದಿನಗಳಿಂದ ನಡೆಯುತ್ತಿರುವ ಆಂತರಿಕ ಕಲಹಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿರುವ ಹೈಕಮಾಂಡ್ ಇದರ ಮೊದಲ ಹಂತವಾಗಿ ಭಿನ್ನಮತಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ಜಾರಿಗೊಳಿಸಲಾಗಿದೆ. ಇದರ ಬಳಿಕ ಎಲ್ಲ ನಾಯಕರನ್ನು ಭೇಟಿ ಮಾಡಿ ಬಿಕ್ಕಟ್ಟು ಬಗೆಹರಿಸಲು ಪ್ರಯತ್ನ ನಡೆಸಲಿದೆ ಎಂದು ಹೇಳಲಾಗಿದೆ.
ಕೇಂದ್ರ ಮಂತ್ರಿ ವಿ ಸೋಮಣ್ಣ ಅವರ ನಿವಾಸದಲ್ಲಿನ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಬಣದ ನಾಯಕರೊಂದಿಗೆ ಆಗಮಿಸಿರುವ ಯತ್ನಾಳ್ ಅವರಿಗೆ ಪಕ್ಷದ ರಾಷ್ಟ್ರೀಯ ಪ್ರಸ್ತುತ ಸಮಿತಿ ಶೋಕಾಸ್ ಜಾರಿಗೊಳಿಸಿದ್ದು 72 ಗಂಟೆಯಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ.
ಕಳೆದ ಎರಡು ತಿಂಗಳ ಹಿಂದೆ ಇದೇ ರೀತಿಯ ನೋಟೀಸ್ ಅನ್ನು ಕೇಂದ್ರ ಶಿಸ್ತು ಸಮಿತಿ ಜಾರಿಗೊಳಿಸಿದ್ದು ಅದಕ್ಕೆ ಯತ್ನಾಳ್ ಅವರು ಸುದೀರ್ಘ ಉತ್ತರ ನೀಡಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಬದಲಾಯಿಸುವಂತೆ ಮನವಿ ಮಾಡಿದ್ದರು.
ಇದಾದ ನಂತರ ಯತ್ನಾಳ್ ಬಣ ಮತ್ತು ಪಕ್ಷದ ಅಧ್ಯಕ್ಷ ವಿಜಯೇಂದ್ರ ಬಣದ ನಡುವೆ ಸಮರ ತೀವ್ರಗೊಂಡಿದ್ದು, ಒಬ್ಬರು ಇನ್ನೊಬ್ಬರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿದಿದ್ದರು ಆದರೆ ಹೈಕಮಾಂಡ್ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಇದೀಗ ದೆಹಲಿ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಬಿಕ್ಕಟ್ಟು ಶಮನಕ್ಕೆ ಮುಂದಾಗಿದ್ದು ಉಭಯ ಬಣಗಳ ನಾಯಕರನ್ನು ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ಆದರೆ ಇದೇ ವೇಳೆ ಮಾಜಿ ಸಚಿವ ಶ್ರೀರಾಮುಲು ಅವರನ್ನು ದೆಹಲಿಗೆ ಬರುವುದು ಬೇಡ ಎಂದು ಹೇಳಿ ವಾಪಸ್ ಕಳುಹಿಸಿದೆ.
ಹೈಕಮಾಂಡ್ ಕರೆಯ ಹಿನ್ನೆಲೆಯಲ್ಲಿ ದಾವಣಗೆರೆಯ ರಾಜನಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವಿಜಯೇಂದ್ರ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ದೆಹಲಿಗೆ ಆಗಮಿಸಿದ್ದಾರೆ. ಮತ್ತೊಂದೆಡೆ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಬಣ ಕೂಡ ದೆಹಲಿಗೆ ಆಗಮಿಸಿದ್ದು ಪ್ರತ್ಯೇಕವಾಗಿ ಸಭೆ ನಡೆಸುವ ಮೂಲಕ ಗಮನ ಸೆಳೆದರು.
ಇದೆ ವೇಳೆ ಪೂರ್ವ ನಿಯೋಜಿತದಂತೆ ಕೇಂದ್ರ ಸಚಿವ ವಿ.ಸೋಮಣ್ಣ ಅವರ ನಿವಾಸದ ಪೂಜೆಗೆ ಯತ್ನಾಳ್ ಹಾಗೂ ಅವರ ತಂಡ ಭಾಗಿಯಾದರೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೊರಗುಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಶಿಸ್ತು ಸಮಿತಿ ತಮಗೆ ನೀಡಿರುವ ಶೋಕಾಸ್ ಗೆ ಯಾವ ಉತ್ತರ ನೀಡಲಿದ್ದಾರೆ ಎಂಬುದನ್ನು ಗಮನಿಸಲಿರುವ ಹೈಕಮಾಂಡ್ ಈ ಎರಡೂ ಬಣದ ನಾಯಕರನ್ನು ಕೂರಿಸಿ ಬಣ ರಾಜಕೀಯಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ.
ಸದ್ಯ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆಯೂ ಹೈಕಮಾಂಡ್ ನಾಯಕರು ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.
Previous Articleಈ ಹೋಟೆಲ್ ಗೆ ಹೋದವರ ಸಾವು ಗ್ಯಾರಂಟಿ
Next Article ಶಕ್ತಿ ಪ್ರದರ್ಶನಕ್ಕೆ ಮುಂದಾದ ದಲಿತ ಮಂತ್ರಿಗಳು