ಮೈಸೂರು,ಮಾ.16-
ಕಳೆದ 11 ವರ್ಷಗಳ ಹಿಂದೆ ಮೈಸೂರಿನ ಇಲವಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನ ದರೋಡೆ ಪ್ರಕರಣಕ್ಕೆ ಇದೀಗ ಏಕಾಏಕಿ ಮರುಜೀವ ಬಂದಿದೆ
ವಿದೇಶಗಳಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಾಣಿಕೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರು ಮಲ ತಂದೆ ಡಿಜಿಪಿ ರಾಮಚಂದ್ರ ರಾವ್ ಹೆಸರು ಥಳಕು ಹಾಕಿಕೊಂಡಿದ್ದ ಈ ಪ್ರಕರಣ ಇದೀಗ ಅವರಿಗೆ ಉರುಳಾಗುವ ಸಾಧ್ಯತೆಯಿದೆ.
ಅಂದು ನಡೆದ ಪ್ರಕರಣದ ತನಿಖೆ ಅನುಮಾನಾಸ್ಪದವಾಗಿ ಮುಕ್ತಾಯಗೊಂಡಿದೆ. ಇದರಲ್ಲಿ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರನ್ನು ದೋಷಮುಕ್ತರನ್ನಾಗಿ ಮಾಡಿದ್ದು ಸಂಶಯಕ್ಕೆ ಕಾರಣವಾಗಿದೆ ಹೀಗಾಗಿ ಈ ಬಗ್ಗೆ ಮರು ತನಿಖೆ ನಡೆಸಲು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸಿಬಿಐಗೆ ಪತ್ರ ಬರೆದಿದ್ದಾರೆ.
ಅಂದು ಚಿನ್ನ ಕಳ್ಳಸಾಗಣೆ ಮಾಡಿದ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಬೇಕು ಜೊತೆಗೆ ಪ್ರಕರಣ ಮುಚ್ಚಿ ಹಾಕಿರುವ ಆರೋಪದಲ್ಲಿ ಸಿಲುಕಿರುವ ಪೊಲೀಸರ ವಿರುದ್ಧವೂ ತನಿಖೆ ನಡೆಸಬೇಕು ಎಂದು ಸ್ನೇಹಮಯಿ ಕೃಷ್ಣ ಸಿಬಿಐಗೆ 9 ಪುಟಗಳ ಪತ್ರ ಬರೆದಿದ್ದಾರೆ.
ಅಂದಿನ ಸಿಐಡಿ ಡಿಜಿಪಿ ಕಿಶೋರ್ ಚಂದ್ರ, ಸಿಐಡಿ ಐಜಿಪಿ ಪ್ರಣವ್ ಮೊಹಂತಿ, ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಭಟ್, ಡಿವೈಎಸ್‌ಪಿ ರಾಘವೇಂದ್ರ ಹೆಗ್ಡೆ, ಅಂದಿನ ಮೈಸೂರು ಎಸ್ಪಿ ಅಭಿನವ ಖರೆ, ಡಿವೈಎಸ್‌ಪಿ ವಿಕ್ರಂ ಆಮ್ಟೆ, ಇಲವಾಲ ಪಿಎಸ್ಐ ಗಣೇಶ್ ಸೇರಿ ಹಲವರ ವಿರುದ್ಧ ತನಿಖೆ ನಡೆಸಲು ಕೋರಿ ಸಿಬಿಐಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.
ನಟಿ ರನ್ಯಾ ರಾವ್ ಪ್ರಕರಣದ ಜೊತೆಗೆ ಇದನ್ನು ಸೇರಿಸಿಕೊಂಡು ತನಿಖೆ ಮಾಡಬೇಕು. ಸಾಧ್ಯವಾಗದಿದ್ದರೆ ಪ್ರತ್ಯೇಕ ಪ್ರಕರಣವಾಗಿ ತನಿಖೆ ನಡೆಸಬೇಕು. ರಾಜ್ಯದಲ್ಲಿ ಕಳೆದ 2014ರಿಂದಲೇ ಈ ರೀತಿ ಚಿನ್ನ ಕಳ್ಳಸಾಗಣೆ ನಡೆದುಕೊಂಡು ಬರುತ್ತಿದೆ. ಪೊಲೀಸರು ಸರಿಯಾಗಿ ತನಿಖೆ ಮಾಡಿ ಆರೋಪಿಗಳನ್ನು ಪತ್ತೆ ಹಚ್ಚಿದ್ದರೇ, ಇಂತಹ ಪ್ರಕರಣ ತಡೆಯಬಹುದಿತ್ತು ಎಂದು ಸ್ನೇಹಮಯಿ ಕೃಷ್ಣ ಪತ್ರದಲ್ಲಿ ಬರೆದಿದ್ದಾರೆ.
ಏನಿದು ಪ್ರಕರಣ:
ಕಳೆದ 2014ರಲ್ಲಿ ಮೈಸೂರಿನ ಇಲವಾಲ ಠಾಣಾ ವ್ಯಾಪ್ತಿಯಲ್ಲಿ 2.27 ಕೋಟಿ ಹಣ ಹಾಗೂ 2 ಕೆಜಿ ಚಿನ್ನ ದರೋಡೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧವೇ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸಿದ್ದರು. ಅಂದಿನ ದಕ್ಷಿಣ ವಲಯದ ಐಜಿಪಿ ರಾಮಚಂದ್ರ ರಾವ್ ಗನ್‌ಮ್ಯಾನ್, ದಕ್ಷಿಣ ಠಾಣೆ ಸಿಬ್ಬಂದಿ ಸೇರಿ ಡಿವೈಎಸ್ಪಿ ಸ್ಕ್ವಾಡ್ ವಿರುದ್ಧ ಆರೋಪ ಕೇಳಿಬಂದಿತ್ತು. ಪ್ರಕರಣದಲ್ಲಿ ವಿಚಾರಣೆ ನಡೆದು ಎಲ್ಲರೂ ಆರೋಪ ಮುಕ್ತರಾಗಿದ್ದರು. ಆದರೆ, ಈವರೆಗೂ ಗೋಲ್ಡ್ ಸ್ಮಗ್ಲಿಂಗ್ ಹಾಗೂ ಹವಾಲಾ ಹಣದ ಮೂಲದ ಸಿಐಡಿ ಪೊಲೀಸರು ತನಿಖೆ ನಡೆಸಿಲ್ಲ. ಇದೀಗ, ಸ್ನೇಹಮಯಿ ಕೃಷ್ಣ ದೂರಿನಿಂದ ಪ್ರಕರಣ ಮತ್ತೆ ಮರುಜೀವ ಪಡೆದುಕೊಂಡಿದೆ.

