ಬೆಂಗಳೂರು : ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡೆಸುತ್ತಿರುವ ಉಪಹಾರಕೂಟವನ್ನು ಬಿಗ್ ಬಾಸ್ ಮನೆಯಲ್ಲಿನ ಆಟ ಎಂದು ವ್ಯಂಗ್ಯವಾಡಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಇವರಿಬ್ಬರ ಜಗಳದಲ್ಲಿ ರಾಜ್ಯದ ಜನತೆ ಬಡವಾಗಿದ್ದಾರೆ ಎಂದು ದೂರಿದ್ದಾರೆ. ರಾಜ್ಯ ಕಾಂಗ್ರೆಸ್ ವಿದ್ಯಮಾನಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹನುಮ ಜಯಂತಿ ದಿನದಂದು ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ನಾಟಿಕೋಳಿ ಮರ್ಡರ್ ಆಗಿದೆ ಎಂದು ಡಿಕೆಶಿ ಮನೆಯಲ್ಲಿ ಬ್ರೇಕ್‌ಫಾಸ್ಟ್ ಗೆ ಆರ್ ಅಶೋಕ್ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, “ಹನುಮ ಜಯಂತಿ ದಿನ ಕನಕಪುರದ ನಾಟಿ ಕೋಳಿಯ ಮರ್ಡರ್ ನಡೆದಿದೆ.
ನಾಟಿಕೋಳಿ ಪಲಾವು, ಬಿರಿಯಾನಿ ಹಾಗೂ ಸಾರು ಮಾಡಲಾಗಿದೆ. ಸಿದ್ದರಾಮಯ್ಯ ಮೊದಲೇ ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿದ್ದು ಸುದ್ದಿಯಾಗಿತ್ತು. ಇಂದು ಹನುಮ ಜಯಂತಿ ದಿನದಂದು ನಾಟಿಕೋಳಿ ಸಾರು ಮಾಡಲಾಗಿದೆ” ಎಂದು ತಿರುಗೇಟು ನೀಡಿದರು. ನಾವು ಆಂಜನೇಯನ ಆರಾಧನೆ ಮಾಡಿದರೆ ಸಿದ್ದರಾಮಯ್ಯ ಅವರು ನಾಟಿಕೋಳಿ ಆರಾಧನೆ ಮಾಡಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ ಇದೊಂದು ಪ್ರಹಸನ. ಮೊನ್ನೆ ಸಿದ್ದರಾಮಯ್ಯ ಮನೆಯಲ್ಲಿ ಮಾಡಲಾಗಿದೆ. ಇಂದು ಡಿಕೆ ಶಿವಕುಮಾರ್ ಮನೆಯಲ್ಲಿ ನಾಟಿ ಕೋಳಿ ಮಾಡಲಾಗಿದೆ. ಸೋನಿಯಾ ಗಾಂಧಿ ಅವರ ನಿರ್ದೇಶನ ಹಾಗೂ ರಾಹುಲ್ ಗಾಂಧಿ ಅವರ ಚಿತ್ರಕತೆ, ಕೆಸಿ ವೇಣುಗೋಪಾಲ್ ಅವರ ಡೈಲಗ್ ಇದರಲ್ಲಿ ಇದೆ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದರು.
ಕೆ.ಸಿ ವೇಣುಗೋಪಾಲ್ ಅವರು ಸಿದ್ದರಾಮಯ್ಯ, ಡಿಕೆಶಿಗೆ ಸೂಚನೆ ನೀಡಿದ್ದಾರೆ. ಇದೆಲ್ಲಾ ಒಂದು ರೀತಿಯಲ್ಲಿ ಪ್ರಹಸನ. ಡಿಕೆ ಶಿವಕುಮಾರ್ ಅವರು ಸಸ್ಯಹಾರಿಯಾಗಿದ್ದಾರೆ. ಹನುಮ ಜಯಂತಿ ಕಾರಣಕ್ಕಾಗಿ ಅವರು ತಿಂದಿಲ್ಲ. ಆದರೆ ಸಿದ್ದರಾಮಯ್ಯ ಅವರಿಗೆ ನಾಮ, ಜನುವಾರ ಕಂಡರೆ ಆಗಲ್ಲ. ಅದಕ್ಕೆ ನಾಟಿಕೋಳಿ ತಿಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಮ ಇಲ್ಲದೆ ಇದ್ದರೂ ಆಂಜನೇಯ ಎಲ್ಲ ಹಳ್ಳಿಗಳಲ್ಲೂ ಇರುತ್ತೆ. ಹನುಮ ಭಕ್ತರಿಗೆ ನೋವಾಗಿದೆ ಹಾಗೂ ಬೇಜಾರಾಗಿದೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ನಾನೂ ವೃತ ಮಾಡುತ್ತಿದ್ದೇನೆ ಎಂದ ಅವರು, ಕಾಂಗ್ರೆಸ್ ಒಂದು ರೀತಿಯಲ್ಲಿ ಒಡೆದ ಮನೆಯಾಗಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಯಾರು ಸಿಎಂ ಎಂದು ಗೊತ್ತೇ ಆಗುತ್ತಿಲ್ಲ. ನಾನೇ ಸಿಎಂ ಎಂದು ಡಿಕೆಶಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ಎಂದು ಆರೋಪಿಸಿದರು.

