ರಷ್ಯಾದ ಅಧ್ಯಕ್ಷ ವ್ಲ್ಯಾಡಿಮಿರ್ ಪುಟಿನ್ ಇತ್ತೀಚಿಗೆ ಭಾರತಕ್ಕೆ ತಮ್ಮ 27 ಗಂಟೆಗಳ ಭೇಟಿಗಾಗಿ ಬಂದಿದ್ದರು. ಅವರನ್ನು ಸ್ವಾಗತಿಸಲು ಸ್ವತಃ ಪ್ರಧಾನಿ ಮೋದಿಯವರೇ ವಿಮಾನದ ತನಕ ಹೋಗಿ ಅವರಿಗೆ ಅಪ್ಪುಗೆಯ ಸ್ವಾಗತ ನೀಡಿದ್ದರು. ಪುತಿನ್ ಅವರೊಂದಿಗೆ ಒಂದೇ ಕಾರಿನಲ್ಲೇ ಪ್ರಯಾಣಿಸಿ ಭಾರತ ರಷ್ಯಾ ಸಂಬಂಧ ಹೇಗಿದೆ ಎಂದು ತೋರಿಸುವುದರೊಂದಿಗೆ ಪುತಿನ್ ಅವರೊಂದಿಗೆ ತಮ್ಮ ವ್ಯಕ್ತಿಕ ಸಂಬಂಧ ಕೂಡ ಹೇಗಿದೆ ಎಂದು ದೇಶಕ್ಕೇ ತೋರಿಸಿಕೊಟ್ಟರು.
ಪುತಿನ್ ಭಾರತಕ್ಕೆ ಬಂದಿದ್ದು ದೇವರೇ ಭಾರತ ಬಂದ ರೀತಿಯಲ್ಲಿ ಬಿಜೆಪಿ ಪರ ಇರುವ ಮಾಧ್ಯಮಗಳು ಬಣ್ಣಿಸತೊಡಗಿದವು. ಪುತಿನ್ ಮೋದಿ ಸ್ನೇಹ ಸಂಬಂಧದಿಂದಾಗಿ ಇನ್ನು ಮುಂದೆ ಪಾಕಿಸ್ತಾನ, ಚೀನಾ ಮತ್ತು ಅಮೆರಿಕಾ ಕೂಡ ಬಾಲ ಮುದುರಿಕೊಂಡು ಭಾರತದ ಶಕ್ತಿಯನ್ನು ನೋಡಿಕೊಂಡಿರಬೇಕು ಎನ್ನುವ ವ್ಯಾಖ್ಯಾನಗಳು ನಡೆದವು.
ಭಾರತ ರಷ್ಯಾದೊಂದಿಗೆ ಆರಂಭದಿಂದಲೂ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡು ಬಂದಿದೆ. ಕಮ್ಯುನಿಸ್ಟ್ ಸೊವಿಯಟ್ ರಷ್ಯಾದ ಕಾಲದಿಂದಲೂ ರಷ್ಯಾ ಭಾರತದ ಪರ ಅನೇಕ ಬಾರಿ ನಿಂತಿದೆ. ಭಾರತ ಯಾರ ಪರವೂ ಇಲ್ಲ ಯಾರ ವಿರುದ್ದವೂ ಇಲ್ಲ ಎನ್ನುವ ಅಲಿಪ್ತ ನೀತಿಯನ್ನು ಅನುಸರಿಸಿದ ಸಂದರ್ಭದಲ್ಲಿ ಅಮೆರಿಕಾ ಮತ್ತು ಸೊವಿಯಟ್ ರಾಷ್ಟ್ರಗಳ ಮಧ್ಯೆ ಶೀತಲ ಸಮರ ನಡೆಯುತ್ತಿದ್ದಾಗಲೂ ಅಮೆರಿಕಾ ಪಾಕಿಸ್ತಾನಕ್ಕೆ ಬೆಂಬಲ ತೋರಿಸುತ್ತಿದಾಗಲೂ ಸೊವಿಯಟ್ ರಷ್ಯಾ ಭಾರತದ ಪರ ಅನೇಕ ಬಾರಿ ನಿಂತು ಭಾರತಕ್ಕೆ ನೈತಿಕ ಬೆಂಬಲವನ್ನು ನೀಡಿದೆ. ಆದರೆ ಎಂದೂ ರಷ್ಯಾ ಭಾರತದ ಒಳಗಿನ ಅಥವಾ ಹೊರಗಿನ ಸಂಘರ್ಷಗಳಲ್ಲಿ ಭಾಗಿಯಾಗಿಲ್ಲ. ಭಾರತಕ್ಕೆ ಶಸ್ತ್ರಾಸ್ತ್ರ ಮಾರುತ್ತಿದ್ದರೂ ಕೂಡ ಭಾರತದೊಂದಿಗೆ ಯಾವುದೇ ಯುದ್ಧದಲ್ಲಿ ಸಹಕಾರ ನೀಡಿಲ್ಲ.
ಪುತಿನ್ ರಷ್ಯಾದ ಅಧ್ಯಕ್ಷರಾದ ನಂತರವೂ ಭಾರತ ರಷ್ಯಾದೊಂದಿಗೆ ಒಳ್ಳೆಯ ಸಂಬಂಧವನ್ನೇ ಇಟ್ಟುಕೊಂಡು ಬಂದಿದೆ. ಪುತಿನ್ ಅವರು ವಾಜಪೇಯಿ ಸರ್ಕಾರದಿಂದ ಹಿಡಿದು ಇಂದಿನ ತನಕ ಅನೇಕ ಸರ್ಕಾರಗಳನ್ನು ಭಾರತದಲ್ಲಿ ನೋಡಿದ್ದಾರೆ. ಮೋದಿಯವರ ಮೂರು ಅವಧಿ ಮನಮೋಹನ್ ಸಿಂಗ್ ಅವರ ಎರಡು ಅವಧಿಯನ್ನೂ ಕಂಡಿದ್ದಾರೆ. ಯಾವಾಗಲೂ ಭಾರತ ಮತ್ತು ರಷ್ಯಾದ ಸಂಬಂಧ ಉತ್ತಮವಾಗಿಯೇ ಇತ್ತು. ಆದರೆ ಮೋದಿಯವರು ಪುತಿನ್ ಅವರೊಂದಿಗೆ ತಮಗೆ ಉತ್ತಮ ಸ್ನೇಹ ಇದೆ ಮತ್ತು ಪುತಿನ್ ತಮ್ಮ ಖಾಸಾ ಸ್ನೇಹಿತ ಎಂದೂ ಬಣ್ಣಿಸಿದ್ದಾರೆ. ಆದರೆ ನಿಜವಾಗಿಯೂ ಪುತಿನ್ ಅವರು ಮೋದಿಯವರ ಬಗ್ಗೆ ಅದೇ ರೀತಿಯ ಭಾವನೆ ಹೊಂದಿದ್ದಾರೆಯೇ ಇಲ್ಲ ತಮ್ಮ ದೇಶದ ಹಿತದೃಷ್ಟಿಯಿಂದ ನಾಟಕವಾಡುತ್ತಿದ್ದಾರೆಯೇ ಎನ್ನುವ ಪ್ರಶ್ನೆಗಳು ಈಗ ಮೂಡಿವೆ.
ಅಮೆರಿಕಾದಿಂದ ಅನೇಕ ಶಾಸ್ತಿಗಳನ್ನು ಅನುಭವಿಸಿ ಯೂರೋಪಿನ ಬಹುತೇಕ ರಾಷ್ಟ್ರಗಳ ಕೆಂಗಣ್ಣಿಗೆ ಕೂಡ ಗುರಿಯಾಗಿರುವ ಪುತಿನ್ ಮತ್ತು ಅವರ ರಷ್ಯಾ ಈಗ ಬಲಿಷ್ಠವಾಗಿರುವ ದೇಶಗಳಾದ ಚೀನಾ ಮತ್ತು ಭಾರತದೊಂದಿಗೆ ಸಂಬಂಧ ವನ್ನು ಉತ್ತಮ ಪಡಿಸಿಕೊಳ್ಳಲು ಹೊರಟಿರುವುದು ವ್ಯಾವಹಾರಿಕವಾದ ಕಾರಣಗಳಿಂದಲೇ ಹೊರತು ವಿಶೇಷ ಪ್ರೀತಿಯಿಂದೇನೂ ಅಲ್ಲ ಎನ್ನಲಾಗಿದೆ. ನಾವು ನಿಮ್ಮ ಪರ ಇದ್ದೇವೆ ನೀವು, ನಿಮ್ಮ ದೇಶವನ್ನು ಯಾರೂ ಹೆದರಿಸಲು ಆಗಲ್ಲ ಬೆದರಿಸಲು ಆಗಲ್ಲ ನೀವು ಇಂದ್ರ ಚಂದ್ರ ಎಂದೆಲ್ಲ ಭಾರತವನ್ನು ಬಣ್ಣಿಸುತ್ತಾ ಭಾರತದ ಸರ್ಕಾರವನ್ನು ಹೊಗಳುತ್ತಾ ಪುತಿನ್ ಮೂಲಕ ರಷ್ಯಾ ಭಾರತದಿಂದ ತನಗೆ ಬೇಕಾದುದ್ದನ್ನೆಲ್ಲ ಪಡೆಯುತ್ತಿದ್ದೆ. ಭಾರತ ಬೇರೆಯವರಿಗೆ ಇರುಸು ಮುರುಸು ಉಂಟು ಮಾಡುವಷ್ಟು ರಷ್ಯಾದ ತೈಲ ಖರೀದಿ ಮಾಡಿದ್ದು ಮತ್ತು ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕಠಿಣವಾಗಿ ವಿರೋಧಿಸದಿರುವುದು ರಷ್ಯಾಕ್ಕೆ ಅನುಕೂಲಕರವಾಗಿದೆ.
ಆದರೆ ಮೋದಿ ತಮ್ಮ ಸ್ನೇಹಿತ ಭಾರತ ರಷ್ಯಾದ ಪರಮಾಪ್ತ ಎನ್ನುವ ಪುತಿನ್ ಭಾರತಕ್ಕೆ ಯಾವಾಗಲೂ ತೊಂದರೆ ಕೊಡುತ್ತಿರುವ ಚೀನಾದೊಂದಿಗೆ ಭಾರತಕ್ಕಿಂತಲೂ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿರುವುದು ಅನೇಕರಲ್ಲಿ ಪ್ರಶ್ನೆಗಳನ್ನು ಹುಟ್ಟಿಸಿದೆ. ಪುತಿನ್ ಭಾರತಕ್ಕೆ ಬಂದ ವಾರದಲ್ಲೇ ರಷ್ಯಾ ಮತ್ತು ಚೀನಾ ಅತ್ಯಂತ ದೊಡ್ಡ ಸಮರಾಭ್ಯಾಸ ನಡೆಸಿರುವುದು ಆಶ್ಚರ್ಯದ ವಿಷಯವೇ ಅಲ್ಲ ಎಂದು ಅನೇಕ ಅಂತಾರಾಷ್ಟ್ರೀಯ ತಜ್ಞರು ಹೇಳಿದ್ದಾರೆ. ಚೀನಾ ಈಗಾಗಲೇ ಶಸ್ತ್ರಾಸ್ತ್ರ ಸಹಕಾರದ ವಿಷಯದಲ್ಲಿ ಚೀನಾ ಮತ್ತು ರಷ್ಯಾದ ಮಧ್ಯೆ ಮಿತಿಯೇ ಇಲ್ಲ ಎಂದು ಹೇಳಿದೆ. ಪುತಿನ್ ಚೀನಾಕ್ಕೆ ಹೋದಾಗ ಅಥವಾ ರಷ್ಯಾದ ಅಧ್ಯಕ್ಷ ಷೀ ರಷ್ಯಾಕ್ಕೆ ಹೋದಾಗ ಚೀನಾ ಮತ್ತು ರಷ್ಯಾದ ಸಂಬಂಧ ಯಾವ ಮಟ್ಟದಲ್ಲಿದೆ ಎಂದು ಎಲ್ಲರೂ ನೋಡಿದ್ದಾರೆ. ಮೋದಿಯವರೊಡಗೂಡಿ ಪುತಿನ್ ಭಾರತದಲ್ಲಿ ನಡೆದ ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳನ್ನು ಖಂಡಿಸಿದರು ವಿನಃ ಪಾಕಿಸ್ತಾನದ ವಿರುದ್ಧ ಸೊಲ್ಲೆತ್ತಲಿಲ್ಲ ಎನ್ನುವುದು ವಿಶೇಷ.
ರಷ್ಯಾ ಮತ್ತು ಭಾರತದ ಮಾಡುವೆ ಇರುವ ತಜಿಕಿಸ್ತಾನದಲ್ಲಿ ಭಾರತ 21ನೇ ಶತಮಾನದ ಆರಂಭದಲ್ಲಿ ಬಹಳ ಮುಖ್ಯವಾದ ಐನೀ ವೈಮಾನಿಕ ತಾಣವನ್ನು ಆರಂಭಿಸಿತ್ತು. ಅದರಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮೇಲೆ ರಕ್ಷಣಾ ಕಾರ್ಯತಂತ್ರದ ನಿಗಾ ಇಡಲು ಅದು ಭಾರತಕ್ಕೆ ಉಪಯುಕ್ತ ವಾಗಿತ್ತು. ಆದರೆ ಇತ್ತೀಚೆಗೆ ರಷ್ಯಾದ ಒತ್ತಡದ ಮೇಲೆ ಭಾರತ ಆ ವಿಮಾನ ತಾಣವನ್ನು ಖಾಲಿ ಮಾಡಬೇಕಾಯಿತು. ಒಂದು ಮಿತ್ರ ರಾಷ್ಟ ಭಾರತದ ರಕ್ಷಣಾ ಹಿತದ ವಿರುದ್ಧ ಹಾಗೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗಿದೆ.
ಭಾರತ ಮತ್ತು ಚೀನಾ ನಡುವೆ ಯುದ್ಧ ನಡೆದರೆ ರಷ್ಯಾ ತಟಸ್ಥ ನಿಲುವು ತಾಳಬಹುದು ಎನ್ನುವ ಅನುಮಾನಗಳು ದಟ್ಟವಾಗಿವೆ. ಯುಕ್ರೇನ್ ನಲ್ಲಿ ಯುದ್ಧ ಮಾಡಿ ಗೆಲುವು ಕಾಣದೆ ದಣಿದಿರುವ ರಷ್ಯಾ ಈಗ ಭಾರತ ದೊಂದಿಂಗೆ ಲಾಭದ ವ್ಯವಹಾರಕ್ಕಾಗಿ ಮಿತ್ರತ್ವದ ನಾಟಕವಾಡಿ ಆ ಕಡೆ ಚೀನಾ ಜೊತೆ ಉತ್ತಮ ಸಂಬಂಧವನ್ನು ಇನ್ನೂ ಬಲ ಪಡಿಸಿಕೊಳ್ಳುತ್ತಿದೆ. ಪುಟಿನ್ ಅವರ ಹೊಗಳು ಮಾತುಗಳನ್ನು ನಂಬದೆ ಮೋದಿಯವರು ಒಂದಷ್ಟು ಜಾಕರೂಕರಾಗಿ ಇರಬೇಕು ಎಂದು ಜಾಕತಿಕ ರಾಜಕೀಯದ ವಿಶ್ಲೇಷಕರು ಸೂಚನೆ ನೀಡುತ್ತಿದ್ದಾರೆ.

