ಬೆಂಗಳೂರು, ಸೆ.21 – ಶಿವಮೊಗ್ಗ (Shimoga) ತುಂಗಾತೀರದಲ್ಲಿ ಟ್ರಯಲ್ ಸ್ಫೋಟ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ಸರ್ವೈವಲ್ ಟಾಕ್ಸ್ ಮಾಡಿ, ಗೂಗಲ್ನಲ್ಲಿ ಬಾಂಬ್ ತಯಾರಿಸುವ ವಿಧಾನದ ಬಗ್ಗೆ ಬಂಧಿತ ಶಂಕಿತ ಉಗ್ರರು ತಿಳಿದುಕೊಂಡಿದ್ದನ್ನು ಪತ್ತೆಹಚ್ಚಿದ್ದಾರೆ.
ವಿಚಾರಣೆ ವೇಳೆ, ಸರ್ವೈವಲ್ ಟಾಸ್ಕ್ ಮಾಡಿದ್ದನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಪೊಲೀಸ್, ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳಲೂ ವಿಶೇಷ ತರಬೇತಿ ನೀಡಲಾಗುತ್ತದೆ. ಇದನ್ನೇ ಸರ್ವೈವಲ್ ಟಾಸ್ಕ್ ಎನ್ನುತ್ತಾರೆ.
ಕಾಡುಗಳಲ್ಲಿ ತಲೆಮರೆಸಿಕೊಂಡು ಎರಡು ಮೂರು ದಿನ ಊಟ ನಿದ್ದೆ ಇಲ್ಲದೆ ಇರುವಂತಹದ್ದೇ ಸರ್ವೈವಲ್ ಟಾಸ್ಕ್ ಆಗಿದ್ದು, ಇಂತಹ ಟಾಸ್ಕ್ಗಾಗಿ ಕಾಡುಗಳಲ್ಲಿ ಕೆಲ ದಿನಗಳ ಕಾಲ ತರಬೇತಿ ನೀಡಲಾಗುತ್ತಿತ್ತು ಎಂಬ ವಿಚಾರವನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಮಂಗಳೂರು ಕುಕ್ಕರ್ ಸ್ಫೋಟ ಬಳಿಕ ಆರೋಪಿ ಶಾರೀಕ್ ಇದೇ ರೀತಿ ಸರ್ವೈವಲ್ ಟಾಸ್ಕ್ನಲ್ಲಿ ತೊಡಗುವ ಉದ್ದೇಶ ಹೊಂದಿದ್ದ. ಅರಣ್ಯ ಪ್ರದೇಶದಿಂದ ಕೆಲ ದಿನಗಳ ಬಳಿಕ ಬೇರೆ ಪಾಸ್ ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗುವ ಪ್ಲಾನ್ ಮಾಡಿದ್ದರು.
ಅಲ್ಲದೆ, ಮೊಬೈಲ್ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂದು ಗೂಗಲ್ನಲ್ಲಿ ಹುಡುಕಾಟ ನಡೆಸಿರುವುದು, ಇದರ ಜೊತೆಗೆ ಅಬ್ದುಲ್ ಮತೀನ್ ಹಾಗೂ ಅರಾಫತ್ ಇಷ್ಟು ದಿನ ತಲೆಮರೆಸಿಕೊಂಡಿದ್ದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಂಬುದು ಬೆಳಕಿಗೆ ಬಂದಿದೆ.
ಪಿಓಕೆಯಲ್ಲೇ ಅರಾಫತ್ ತರಬೇತಿ ಪಡೆದಿರುವ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ಯಾರಿಗೂ ತಿಳಿಯದಂತೆ ದುಬೈಗೆ ತೆರಳಿ ಅಲ್ಲಿಂದ ಪಾಕಿಸ್ತಾನಕ್ಕೆ ಹೋಗುತ್ತಿದ್ದನು. ಅಲ್ಲಿನ ಉಗ್ರರು ಮತಾಂಧ ಮನಸ್ಥಿತಿಯ ಹುಡುಗರನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದರು. ನಂತರ ನಕಲಿ ಪಾಸ್ ಪೋರ್ಟ್ ಮೂಲಕ ದುಬೈಗೆ ಕರೆಸಿಕೊಳ್ಳುತ್ತಿದ್ದರು.
ಅಲ್ಲಿಂದ ಪಾಕಿಸ್ತಾನದ ಪಾಸ್ಪೋರ್ಟ್ ನೀಡಿ ಪಾಕಿಸ್ತಾನಕ್ಕೆ ಕರೆಸಿಕೊಳ್ಳುತ್ತಿದ್ದರು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಬೇಕಾದ ಎಲ್ಲಾ ತರಬೇತಿ ಸಿಗುತ್ತಿತ್ತು. ಮಿಲಿಟೆಂಟ್ ಮಾದರಿಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಎಲ್ಲಾ ಮುಗಿದ ನಂತರ ಪಾಕ್ನಿಂದ ದುಬೈಗೆ ಬಂದು ಭಾರತದ ಪಾಸ್ ಪೋರ್ಟ್ ಬಳಸಿ ಭಾರತಕ್ಕೆ ಬರುತ್ತಿದ್ದರು ಎಂಬ ಸತ್ಯಸಂಗತಿಯನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.