ಬೆಂಗಳೂರು, ಸೆ.21 -ಹೆದ್ದಾರಿಗಳಲ್ಲಿ ಪೊಲೀಸ್ (Karnataka Police) ವಾಹನಗಳು ನಿಗದಿತ ವೇಗದ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ) ಅಲೋಕ್ ಮೋಹನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹೆದ್ದಾರಿಗಳಲ್ಲಿ ಪೊಲೀಸ್ ವಾಹನಗಳು ನಿಯಮ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ ಎಲ್ಲಾ ವರ್ಗದ ಪೊಲೀಸ್ ವಾಹನಗಳು ನಿಗದಿತ ವೇಗದ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸೂಚನೆ ನೀಡಿದ್ದಾರೆ.
ಈ ಸಂಬಂಧ ಅಲೋಕ್ ಮೋಹನ್ ಅವರು ಸುತ್ತೋಲೆಯನ್ನು ಹೊರಡಿಸಿ ರಾಜ್ಯದ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಗರಿಷ್ಠ ಚಾಲನಾ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ. ಆದ್ದರಿಂದ ಈ ಹೆದ್ದಾರಿಗಳಲ್ಲಿನ ಎಲ್ಲಾ ವಾಹನಗಳನ್ನು ಅವುಗಳಿಗೆ ನಿಗದಿಪಡಿಸಿದ ಗರಿಷ್ಠ ವೇಗದ ಮಿತಿಗಿಂತ ಕಡಿಮೆ ಚಾಲನೆ ಮಾಡಬೇಕಾಗುತ್ತದೆ.
ಆದಾಗ್ಯೂ, ಕೆಲವೊಮ್ಮೆ ವಿವಿಧ ವರ್ಗದ ಪೊಲೀಸ್ ವಾಹನಗಳನ್ನು ಗರಿಷ್ಠ ವೇಗದ ಮಿತಿಗಿಂತ ಹೆಚ್ಚು ವೇಗದಲ್ಲಿ ಓಡಾಡುತ್ತಿರುವುದು ವರದಿಯಾಗುತ್ತಿರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಘಟಕದ ಅಧಿಕಾರಿಗಳು ತಮ್ಮ ಘಟಕಗಳಲ್ಲಿನ ಪೊಲೀಸ್ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಜ್ಯ ಹೆದ್ದಾರಿಗಳಿಗೆ ನಿಗದಿಪಡಿಸಿದ ವೇಗದ ಮಿತಿಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಈ ಹೆದ್ದಾರಿಗಳಲ್ಲಿ ನಿಗದಿತ ವೇಗದ ಮಿತಿಯನ್ನು ಮೀರಿ ಯಾವುದೇ ವರ್ಗದ ಪೊಲೀಸ್ ವಾಹನಗಳು ವೇಗವಾಗಿ ಚಲಿಸುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಎಲ್ಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.