ಕನ್ನಡ ಧಾರಾವಾಹಿಗಳಲ್ಲಿ ಮದುವೆಗೆ ಮೊದಲು ಪ್ರೆಗ್ನೆಂಟ್ ಆಗುವ ಟ್ರೆಂಡ್ ಶುರುವಾಗಿದೆಯಾ?
ಟಾಪ್ ಧಾರಾವಾಹಿ ಜ಼ೀ ಕನ್ನಡದ ʻಕರ್ಣʼದಲ್ಲಿ ನಿತ್ಯಾ ಪಾತ್ರ ಪ್ರೀತಿಯಿಂದ ಮೋಸ ಹೋಗಿ ಗರ್ಭಿಣಿಯಾಗಿದ್ದಾಳೆ. ನಾಯಕ ಕರ್ಣನನ್ನು ಮದುವೆ ಆದರೂ ಗರ್ಭಕ್ಕೆ ಕಾರಣ ಹಳೆಯ ಸ್ನೇಹಿತ. ಕರ್ಣ-ನಿತ್ಯಾಳದು ಮದುವೆ ನಾಟಕ. ಅಸಲಿಗೆ ನಿತ್ಯಾಳನ್ನು ಈ ಅವಮಾನಕರ ಪರಿಸ್ಥಿತಿಯಿಂದ ಪಾರು ಮಾಡಲೆಂದೇ ತ್ಯಾಗಜೀವಿ ಕರ್ಣ ಮದುವೆಯಾಗಿದ್ದು. ನಿತ್ಯಾ ಇಲ್ಲಿ ಪುಟ್ಟಣ್ಣ ಕಣಗಾಲರ ʻಅಮೃತ ಘಳಿಗೆʼ ಚಿತ್ರದ ನಾಯಕಿಯ ಹಾಗೆ. ಅಲ್ಲಿ ಪದ್ಮಾವಾಸಂತಿ ಗರ್ಭಕ್ಕೆ ಕಾರಣನಾಗಿದ್ದು ರಾಮಕೃಷ್ಣ, ಮದುವೆಯಾಗಿದ್ದು ಶ್ರೀಧರ್!
ಇನ್ನು ಉದಯ ಟಿವಿಯ ಮೂರು ಧಾರಾವಾಹಿಗಳಲ್ಲಿ ಮದುವೆಗೆ ಮುಂಚೆ ಪ್ರೆಗ್ನೆಂಟ್ ಆದ ಹುಡುಗೀರ ಕಥೆಯಿದೆ. ʻಸಿಂಧುಭೈರವಿʼ ಧಾರಾವಾಹಿಯಲ್ಲಿ ನಾಯಕಿಯ ಅಕ್ಕ ಭವಾನಿ ಪ್ರೀತಿಯ ಅಮಲಲ್ಲಿ ಮದುವೆಗೆ ಮುಂಚೆ ಗರ್ಭಿಣಿ. ಇವರ ಪ್ರೀತಿಗೆ ನಾಯಕನ ಅಮ್ಮನೇ ಖಳನಾಯಕಿ. ಎಲ್ಲೂ ಸರಿ ಹೋಗಿ ಗರ್ಭಿಣಿ ಭವಾನಿಗೆ ಪ್ರಿಯಕರ ಅಥರ್ವನ ಜೊತೆ ಮದುವೆ ನೆಡೆದಿದೆ. ವಿಶೇಷ ಅಂದ್ರೆ ಈ ಗರ್ಭವನ್ನು ಒಂದು ಅಪರಾಧ ಅಂತ ಸುತ್ತ ಇರುವ ಯಾವ ಪಾತ್ರವೂ ಭಾವಿಸಿದ ಹಾಗೆ ಕಾಣುತ್ತಿಲ್ಲ. ಗರ್ಭಿಣಿ ಮದುವೆ ಯಾವುದೇ ವಿರೋಧವಿಲ್ಲದೇ ನೆಡೆಯುತ್ತಿದೆ. ಉದಯ ಟಿವಿಯ ಇನ್ನೊಂದು ಧಾರಾವಾಹಿ ʻಮೈನಾʻ. ಇದರಲ್ಲಿ ನಾಯಕಿಯೇ ಮದುವೆಯಾಗದೇ ಗರ್ಭಿಣಿ. ಇವಳ ಗರ್ಭಕ್ಕೆ ಪಾರ್ಟಿಯಲ್ಲಿ ಆದ ಮೋಸ ಕಾರಣ. ಆದರೆ ಮೋಸಗಾರ ಯಾರು ಅಂತ ಗೊತ್ತಿಲ್ಲ. ಇಲ್ಲಿ ಮದುವೆಗೆ ಮುಂಚೆ ಗರ್ಭ ಗುಟ್ಟಾಗಿ ಉಳಿದಿದೆ. ಬಹಿರಂಗವಾದಾಗ ಏನು ಅಲ್ಲೋಲಕಲ್ಲೋಲ ಆಗುತ್ತದೆಯೋ ಕಾದು ನೋಡಬೇಕು. ಉದಯ ಟಿವಿಯ ಇನ್ನೊಂದು ಧಾರಾವಾವಿ ʻಚಿಕ್ಕೆಜಮಾನಿʼಯಲ್ಲಿ ನಾಯಕಿ ಕಾವೇರಿ ಮದುವೆಗೆ ಮುಂಚೆ ಗರ್ಭವತಿ ಆಗಿರುತ್ತಾಳೆ. ಸ್ನೇಹಿತನಿಂದ ಮೋಸಕ್ಕೆ ಒಳಗಾಗಿ ಗರ್ಭಧರಿಸುವ ಅವಳು, ನಂತರ ತನಗಿಂತ ತುಂಬ ವಯಸ್ಸಾದ ಕಂಪನಿ ಯಜಮಾನನನ್ನು ಮದುವೆ ಆಗಬೇಕಾಗುತ್ತದೆ. ಈ ಗರ್ಭಕಥೆ ಕೂಡ ಕಥೆಯಲ್ಲಿ ಗುಟ್ಟಾಗಿತ್ತು, ಈಗ ಗರ್ಭಪಾತ ಆಗಿದೆ. ಒಟ್ಟಿನಲ್ಲಿ ಈ ಮೊದಲೆಲ್ಲ ನಾಯಕಿ ಅಂತ ಗಂಗೆಯಷ್ಟು ಪವಿತ್ರ, ನಿಸ್ವಾರ್ಥ, ತ್ಯಾಗಜೀವಿಯಾಗಿರುತ್ತಿದ್ದಳು. ಮದುವೆ ಆದರೂ ವ್ರತ ಕಥೆ ಅಂತ ಗರ್ಭ ಧರಿಸಲು ಟೈಮೇ ಇರುತ್ತಿರಲಿಲ್ಲ! ಈಗ ಕಾಲ ಬದಲಾಗಿದೆ. ಲಿವ್ – ಇನ್ ಟುಗೆದರ್, ಮದುವೆಯಾಗದೇ ಮಗು ಪಡೆಯುವುದು ಟ್ರೆಂಡ್ ಆಗುತ್ತಿರುವ ಈ ದಿನಗಳಲ್ಲಿ ಮದುವೆಗೆ ಮುಂಚೆ ಗರ್ಭ ಧರಿಸುವುದು ʻಪರವಾಗಿಲ್ಲʻ ಎನ್ನುವ ಹಾಗೆ ತೋರುತ್ತಿದೆ.
ಟ್ರೆಂಡ್ ಆಗ್ತಿದೆಯಾ ಮದುವೆಗೆ ಮುಂಚೆ ಪ್ರೆಗ್ನೆಂಟ್?
Previous Articleಚನ್ನರಾಜ ಹಟ್ಟಿಹೊಳಿ ಹಾಕಿದ ಪೋಸ್ಟ್ ನಲ್ಲಿ ಏನಿದೆ ಗೊತ್ತಾ?
Next Article ಎಚ್ಚೆತ್ತ ರಾಜ್ಯ ಸರ್ಕಾರ

