ಬೆಂಗಳೂರು, ನ.9- ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಬಿಜೆಪಿ ಶಾಸಕರ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡದೆ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ನಿಲುವು ಬದಲಾಗದೆ ಹೋದರೆ ವಿಧಾನಸೌಧದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರನ್ನು ಗುರಿಯಾಗಿಸಿಕೊಂಡು ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ನಮ್ಮ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ.ಇದೊಂದು ಸೇಡಿನ ರಾಜಕಾರಣವಾಗಿದ್ದು, ಈ ತಿಂಗಳಿನಲ್ಲಿಯೇ ವಿಧಾನಸೌಧ ಮುಂಭಾಗ ಅಥವಾ ಫ್ರೀಡಂ ಪಾರ್ಕಿನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಹೇಳಿದರು.
ಸರ್ಕಾರದಲ್ಲಿ ಯಾವುದೇ ನಿಯಂತ್ರಣವಿಲ್ಲ. ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದನೆ ಇಲ್ಲ ಹೀಗಾಗಿ
ಈ ಸರ್ಕಾರದ ಆಡಳಿತ ವಿರೋಧಿ ನೀತಿಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನ ಕೆಲವು ರಸ್ತೆಗಳನ್ನು ನೋಡಿದರೆ ಇದು ಬೆಂಗಳೂರು ನಗರವೂ ಅಥವಾ ಹಳ್ಳಿಯೂ ಎನ್ನುವ ಅನುಮಾನ ಕಾಡುತ್ತಿದೆ. ಕೆಲ ಕಡೆಗಳಲ್ಲಿ ಅನುದಾನ ನೀಡಿದ್ದರೂ, ಕೆಲಸ ಮಾಡಲು ಬಿಡುತ್ತಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ವ್ಯಯುಕ್ತಿಕ ದ್ವೇಷ ಬಿಡಬೇಕು ಎಂದು ಕಿವಿಮಾತು ಹೇಳಿದರು.
ಸದ್ಯ ರಾಜ್ಯದೆಲ್ಲೆಡೆ ಎಲ್ಲಾ ಮಾದರಿಯ ಕಾಮಗಾರಿಗಳ ಮಂಜೂರು ಹಾಗೂ ಹಣ ಪಾವತಿಗೆ ಶೇಕಡಾ 7ರಿಂದ 7.5 ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಇದು ಈಗಿನ ಸರ್ಕಾರದ ಮಹಾನ್ ಸಾಧನೆಯಾಗಿದೆ. ಇದರ ವಿರುದ್ಧ ಹೋರಾಟ ಅಗತ್ಯವಾಗಿದ್ದು, ರಾಜ್ಯದ ಎಲ್ಲಾ ಭಾಗಗಳಿಂದ ಸಾವಿರಾರರು ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದಾರೆ ಎಂದು ತಿಳಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾಮಗಾರಿಗಳ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಅಕ್ರಮ ಕಾಮಗಾರಿಗಳು ನಡೆದಿದ್ದರೆ. ಈ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ.ಆದರೆ, ಉದ್ದೇಶ ಪೂರಕವಾಗಿ ಅನುದಾನ ನಿಲ್ಲಿಸಿ, ಕಾಮಗಾರಿ ನಡೆಯದಂತೆ ನೋಡಿಕೊಳ್ಳುವುದು ಸೇಡಿನ ರಾಜಕಾರಣವಾಗಿದೆ ಎಂದು ಅವರು ಉಲ್ಲೇಖಿಸಿದರು