ಬೆಂಗಳೂರು,
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಪುತ್ರನಿಗೆ ಬೆಂಗಳೂರು ಪೊಲೀಸರು ಕ್ಲೀನ್ ಚಿಟ್ ನೀಡಲು ಸಜ್ಜಾಗಿದ್ದಾರೆ.
ಬೆಂಗಳೂರಿಗೆ ಬಂದಿದ್ದ ಶಾರೂಖ್ ಖಾನ್ ಅವರ ಪುತ್ರ
ಆರ್ಯನ್ ಖಾನ್ ತನ್ನ ಸ್ನೇಹಿತರೊಂದಿಗೆ ಪಬ್ ಗೆ ಹೋಗಿದ್ದರು.ಅಲ್ಲಿ ಅವರು ಸಾರ್ವಜನಿಕರ ಜೊತೆ ಅಸಭ್ಯ ವರ್ತನೆ ತೋರಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರು.
ಆದರೆ ಈ ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಇತಿಶ್ರೀ ಹಾಡಲು ಕಬ್ಬನ್ ಪಾರ್ಕ್ ಪೊಲೀಸರು ನಿರ್ಧರಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಬಲವಾದ ಪುರಾವೆಗಳು ಲಭ್ಯವಾಗದ ಕಾರಣ ಪ್ರಕರಣವನ್ನು ಮುಕ್ತಾಯಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಕಳೆದ ನವೆಂಬರ್ 28 ರಂದು ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪಬ್‌ನ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಈ ವಿಚಾರಣೆ ವೇಳೆ, ಆರ್ಯನ್ ಖಾನ್ ಉದ್ದೇಶಪೂರ್ವಕವಾಗಿ ಅಥವಾ ಯಾರನ್ನೂ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ಪಬ್ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.
ಅಲ್ಲದೆ, ವೈರಲ್ ಆದ ವಿಡಿಯೋದಲ್ಲಿನ ಅಂಶಗಳು ಕಾನೂನಾತ್ಮಕವಾಗಿ ಆರೋಪ ಸಾಬೀತುಪಡಿಸಲು ಪೂರಕವಾಗಿಲ್ಲದ ಕಾರಣ ಶೀಘ್ರದಲ್ಲೇ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಆರ್ಯನ್ ಖಾನ್ ಬೆಂಗಳೂರಿಗೆ ಆಗಮಿಸಿದಾಗ ಈ ಘಟನೆ ನಡೆದಿತ್ತು. ಪಬ್‌ನಲ್ಲಿ ತಮ್ಮನ್ನು ನೋಡಲು ಮುಗಿಬಿದ್ದ ಅಭಿಮಾನಿಗಳತ್ತ ಆರ್ಯನ್ ಮಧ್ಯದ ಬೆರಳು ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು.
ಇದನ್ನು ಕಂಡು ಆಕ್ರೋಶಗೊಂಡಿದ್ದ ನೆಟ್ಟಿಗರು, ಬೆಂಗಳೂರು ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ದೂರು ದಾಖಲಿಸಿದ್ದರು.
ಈ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದಿದೆ ಎಂದು ಹೇಳಲಾದ ಪಬ್ ನ ಸಿಬ್ಬಂದಿಯ ಹೇಳಿಕೆ ಮತ್ತು ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರ್ಯನ್ ಖಾನ್ ಅವರ ಕೃತ್ಯವು ‘ಅಪರಾಧ’ ಎಂಬಂತೆ ಬಿಂಬಿತವಾಗುತ್ತಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಗೊತ್ತಾಗಿದೆ.
Previous Articleಶಿಕಾರಿಪುರದಲ್ಲಿ ಬಂದೂಕು ಕಾರ್ಖಾನೆ
Next Article ಜೈಲು ಸುಧಾರಣೆಗೆ ಅಲೋಕ್ ಕುಮಾರ್ ಖಡಕ್ ಕ್ರಮ

