ಭೋಪಾಲ್,ಮೇ.27- ಕೇವಲ ಎರಡು ವರ್ಷಗಳಲ್ಲಿ ಬರೋಬರಿ 15 ಮಂದಿಯನ್ನು ವಿವಾಹವಾಗಿ ಹನಿಮೂನ್ ಹೆಸರಿನಲ್ಲಿ ಲಕ್ಷಾಂತರ ರೂಗಳ ಮೋಸ ಮಾಡಿದ್ದ ಖತರ್ನಾಕ್ ವಂಚಕಿಯನ್ನು ಬಂಧಿಸುವಲ್ಲಿ ನಗರದ ಕ್ರೈಂ ಬ್ರಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬುಧ್ವಾರದ ಸೀಮಾ(32) ಬಂಧಿತ ವಂಚಕಿಯಾಗಿದ್ದು, ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿರುವ ವಂಚಕಿಯು, ಬೇರೆ ಬೇರೆ ಹೆಸರಿಟ್ಟುಕೊಂಡು 15 ಮಂದಿಯನ್ನು
ಮದುವೆ ಮಾಡಿಕೊಳ್ಳುವ ಹನಿಮೂನ್ ಹೆಸರಿನಲ್ಲಿ ಅವರಿಗೆಲ್ಲ ಮೋಸ ಮಾಡಿರುವುದನ್ನು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾಳೆ.
ಮಹಿಳೆ ಪೂಜಾ, ರಿಯಾ, ರೀನಾ, ಸುಲ್ತಾನಾ ಎಂಬ ಹೆಸರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ವಾಸ ಮಾಡುವ ಮೂಲಕ ಪೊಲೀಸರ ದಾರಿ ತಪ್ಪಿಸಿದ್ದಾಳೆ.
ಉಜ್ಜೈನಿ, ಜಬಲ್ಪುರ್, ನರ್ಮದಾಪುರಂ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಯುವತಿ ವಿರುದ್ಧ ವಂಚನೆಯ ದೂರು ದಾಖಲಾಗಿವೆ.
ಕಳೆದ ಎರಡು ವರ್ಷಗಳ ಹಿಂದೆ ಸೀಮಾ ವಿರುದ್ಧ ಕಾಂತಪ್ರಸಾದ್ ಎಂಬುವವರು ದೂರು ದಾಖಲು ಮಾಡಿದ್ದರು. ಅಂದಿನಿಂದಲೂ ಯುವತಿಗೋಸ್ಕರ ಪೊಲೀಸರು ಹುಡುಕಾಟ ನಡೆಸಿ ಕೊನೆಗೂ ಬಂಧಿಸಲಾಗಿದೆ.
ಮದುವೆ ಮಾಡಿಕೊಳ್ಳುವ ನೆಪದಲ್ಲಿ ಮೋಸ ಮಾಡಿರುವ ಮಹಿಳೆ ಲಕ್ಷಗಟ್ಟಲೆ ಹಣ ಲಪಟಾಯಿಸಿದ್ದಾಳೆ. ಮದುವೆಯಾದ ಬಳಿಕ ಹನಿಮೂನ್ ಅಥವ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಎಂದು ಹೇಳಿ ಹಣ ಪಡೆದು ಪರಾರಿಯಾಗುತ್ತಿದ್ದಳು ಎಂದು ಡಿಸಿಪಿ ಶೈಲೆಂದ್ರ ಚೌಹಾಣ್ ತಿಳಿಸಿದ್ದಾರೆ. ಪ್ರಮುಖವಾಗಿ ಕೋವಿಡ್ ಸಂದರ್ಭದಲ್ಲಿ ಅನೇಕ ಹಳ್ಳಿಗಳಲ್ಲಿ ಮದುವೆ ಹೆಸರಿನಲ್ಲಿ ಜನರನ್ನ ಬಲೆಗೆ ಬೀಳಿಸಿ ಮದುವೆಯ ನೆಪದಲ್ಲಿ ಮೋಸ ಮಾಡಿದ್ದಾಳೆ.