ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿರುವ ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಶಿವಮೊಗ್ಗದಲ್ಲಿ ತುರ್ತು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು ನಾಳೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಎಲ್ಲವನ್ನೂ ವಿವರಿಸಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.
ಇದರಲ್ಲಿ ತಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ ಹೀಗಾಗಿ ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ಧ. ತಮ್ಮ ವಿರುದ್ಧದ ಎಲ್ಲ ಆರೋಪಗಳಿಂದ ಮುಕ್ತನಾಗಿ ನಾನು ಹೊರಗೆ ಬರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ತಮ್ಮ ವಿರುದ್ಧ ಪ್ರತಿಪಕ್ಷಗಳು ಮಾಡುತ್ತಿರುವ ಹೋರಾಟದಿಂದ ಬಿಜೆಪಿ ಸರ್ಕಾರ ಹಾಗು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ತಾವು ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದರು.
ನಾನು ತಪ್ಪು ಮಾಡಿದ್ದರೆ ನನಗೆ ದೇವರು ಶಿಕ್ಷೆ ನೀಡಲಿ, ನನಗೆ ಯಾರಿಗೂ ಇರುಸು – ಮುರುಸು ಉಂಟು ಮಾಡುವ ಇಚ್ಛೆ ಇಲ್ಲ. ಆದರೆ ನನಗೆ ಪೂರ್ಣ ವಿಶ್ವಾಸ ಇದೆ, ದೇವರ ಮೇಲೆ ನಂಬಿಕೆ ಇದೆ, ನಾನು ಇವೆಲ್ಲದರಿಂದ ಮುಕ್ತವಾಗಿ ಬರ್ತೇನೆ ಎಂದು ಹೇಳಿದರು.