ಬೆಳಗಾವಿ: ಕ್ರೌರ್ಯ ಹೇಗೆಲ್ಲ ಇರುತ್ತದೆ ಎನ್ನುವುದಕ್ಕೆ ಊಹೆ ಮತ್ತು ನಂಬಿಕೆಗೂ ನಿಲುಕದ ಅದೆಷ್ಟೋ ಉದಾಹರಣೆಗಳು ನಮ್ಮೆದುರಿಗೆ ಇವೆ. ಅಂತಹದ್ದೆ ಒಂದು ಉದಾಹರಣೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ಕುಂದಾನಗರಿಯ ಜನರನ್ನು ಅಕ್ಷರಶಃ ಬೆಚ್ಚಿ ಬೀಳಿಸಿದೆ.
ಹೌದು, ರಾಕ್ಷಸಿ ಕೃತ್ಯವೊಂದು ಬೆಳಗಾವಿ ಜಿಲ್ಲೆ ಮೂಡಲಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಹಳ್ಳದಲ್ಲಿ ಭ್ರೂಣಗಳು ತೇಲಿ ಬಂದಿದ್ದು ಜನರಲ್ಲಿ ದಿಗ್ಭ್ರಮೆ ಮೂಡಿಸಿದೆ.
ಆದರೆ ಈ ಹಳ್ಳದಲ್ಲಿ ತೇಲಿ ಬಂದಿದ್ದು, ಏಳು ಬ್ರೂಣಗಳು. ಇದರಿಂದ ಇದು ಮೇಲ್ನೋಟಕ್ಕೆ ಯಾರೋ ಕಿರಾತಕರೆ ಮಾಡಿದ್ದು ಎನ್ನುವುದು ಕಂಡುಬರುತ್ತದೆ.
ಭ್ರೂಣಗಳ ಹತ್ಯೆಗೈದವರು ಯಾರು? ಎನ್ನುವ ಪ್ರಶ್ನೆ ಹಾಗು ಚರ್ಚೆ ಇಡೀ ಜಿಲ್ಲೆಯಲ್ಲಿ ವ್ಯಾಪಿಸಿದೆ.
ಇಲ್ಲಿನ ಬಸ್ ನಿಲ್ದಾಣ ಸಮೀಪದ ಹಳ್ಳದಲ್ಲಿ 7 ಭ್ರೂಣಗಳು ಐದು ಡಬ್ಬಗಳಲ್ಲಿ ಪತ್ತೆಯಾಗಿವೆ. ಇದನ್ನು ಗಮನಿಸಿದ ಸ್ಥಳೀಯರು ಮೂಡಲಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಭ್ರೂಣಗಳನ್ನು ಹಳ್ಳದಿಂದ ಹೊರತೆಗೆದು ಸ್ಥಳೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸ್ಥಳೀಯ ಆರೋಗ್ಯಾಧಿಕಾರಿಗಳು, ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಪ್ರಕರಣ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬೆಳಗಾವಿ ಡಿಹೆಚ್‌ಒ ಡಾ.ಮಹೇಶ್ ಕೋಣಿ, ಮೂಡಲಗಿ ಪಟ್ಟಣದ ಸೇತುವೆ ಕೆಳಗೆ ಐದು ಡಬ್ಬಿಯಲ್ಲಿ ಏಳು ಭ್ರೂಣಗಳು ಪತ್ತೆಯಾಗಿವೆ. ಫೋಟೋ ನೋಡಿದರೆ ಪತ್ತೆಯಾದ ಭ್ರೂಣಗಳು ಐದು ತಿಂಗಳು ತುಂಬಿದ ಹಾಗೇ ಕಾಣುತ್ತಿವೆ. ಭ್ರೂಣಗಳನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ನಂತರ ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ನಡೆಸಲಾಗುವುದು. ಈ ಕೃತ್ಯವೆಸಗಿದವರು ಯಾರು? ಎನ್ನುವ ಬಗ್ಗೆ ತನಿಖೆಯಿಂದ ಗೊತ್ತಾಗಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಕಾರಿಯೊಂದಿಗೆ ಚರ್ಚಿಸಿ ತನಿಖಾ ತಂಡ ರಚಿಸುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಶಿಕ್ಷಾರ್ಹ ಅಪರಾಧ. ಈ ರೀತಿ ಒಂದೇ ಸ್ಥಳದಲ್ಲಿ ಏಳು ಭ್ರೂಣಗಳು ಪತ್ತೆಯಾಗಿದ್ದು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ. ಏನೇ ಆಗಲಿ ಈ ಘಟನೆ ಕ್ರೌರ್ಯದ ಅತಿರೇಕತನವಲ್ಲದೆ ಇನ್ನೇನು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.