ಬೆಂಗಳೂರು, ಮಾ.3- ಗುತ್ತಿಗೆ ಪಡೆಯಲು ಲಂಚ ಪಡೆಯುತ್ತಿದ್ದ ವೇಳೆ ತಮ್ಮ ಪುತ್ರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ಬೆನ್ನಲ್ಲೇ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಿಜೆಪಿಯಿಂದ ಅಮಾನತು ಮಾಡುವ ಸಾಧ್ಯತೆಯಿದೆ.
ಲಂಚ ಪ್ರಕರಣದಿಂದ ಬಿಜೆಪಿ ತೀವ್ರ ಮುಜುಗರ ಅನುಭವಿಸುವಂತಾಗಿದೆ.ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿಯೇ ಅವರಿಂದಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ(ಕೆಎಸ್‍ಡಿಎಲ್)ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಗಿದೆ.
ಪಕ್ಷದ ಹಿರಿಯ ನಾಯಕ ಅಮಿತ್ ಶಾ ಅವರ ರಾಜ್ಯ ಭೇಟಿಯ ಸಮಯದಲ್ಲಿ ಈ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಮಾಡಾಳ್ ಅವರಿಗೆ ಕರೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ ತೀವ್ರ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ಪಕ್ಷದ ರಾಷ್ಟ್ರೀಯ ಸಮಿತಿ ಈ ಸಂಬಂಧ ವರದಿ ಕೇಳಿದ್ದು,ಈಗಾಗಲೇ ರಾಜ್ಯ ಘಟಕ ಅದನ್ನು ರವಾನಿಸಿದೆ.ಈ ಕುರಿತಂತೆ ವರಿಷ್ಠರ ಅಭಿಪ್ರಾಯ ನಿರೀಕ್ಷಿಸುತ್ತಿರುವ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅದು ಬರುತ್ತಿದ್ದ ಹಾಗೆ ಇವರನ್ನು ಪಕ್ಷದಿಂದ ಅಮಾನತು ಪಡಿಸುವ ನಿರ್ಧಾರ ಪ್ರಕಟಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ದೊಡ್ಡ ಸಾಕ್ಷಿ:
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ,ಡಬಲ್ ಎಂಜಿನ್ ರಾಜ್ಯ ಬಿಜೆಪಿ ಸರ್ಕಾರ ಭರ್ತಿ ಶೇ. 40 ರಷ್ಟು ಕಮೀಷನ್ ಉಡಾಯಿಸುತ್ತಿದೆ ಎನ್ನುವುಕ್ಕೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಸಾಬೂನು ಕಾರ್ಖಾನೆಯನ್ನು ಸ್ವಚ್ಚಗೊಳಿಸುವುದು ಎಂದರೆ ಇದೇನಾ? ನಿಮ್ಮ ಸ್ವಚ್ಚ ಭಾರತ್ ಪರಿಕಲ್ಪನೆಯೇ ಅದ್ಭುತ. ಅಮಿತ್ ಶಾ ಅವರೇ ಎಂದು ಟೀಕಿಸಿದ್ದಾರೆ.
ಅಮಿತ್ ಶಾ ಅವರೇ ಈಗ ಹೇಳಿ, ಕರ್ನಾಟಕ ಯಾರ ಎಟಿಎಂ? ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇವೆ ಎಂದು ನೀವು ಹೇಳಿದ್ದು, ಈ ಅರ್ಥದಲ್ಲಿಯಾ? ಭ್ರಷ್ಟಾಚಾರ ಮುಕ್ತ ಮಾಡುವುದು ಎಂದರೆ ಅಪ್ಪನ ಪರವಾಗಿ ಪುತ್ರರತ್ನ ಕಂತೆಕಂತೆ ಕಟ್ಟುಗಳನ್ನು ಸ್ವಂತ ಎಟಿಎಂಗೆ ಇಳಿಸುವುದಾ? ಸಾಬೂನು ಕಾರ್ಖಾನೆಯನ್ನು ಸಖತ್ತಾಗಿ ಸಾರಿಸಿ ಗಂಡಾಂತರ ಮಾಡುವುದಾ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ರಾಜೀನಾಮೆ ಕೊಡಿ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ ಬಿಜೆಪಿ ಭ್ರಷ್ಟಾಚಾರ ಮಾಡಿದ್ದೇ ಆದರೆ ಸಾಕ್ಷ್ಯ ಕೊಡಿ ಎಂದು ಮುಖ್ಯಮಂತ್ರಿಗಳು ಕೇಳುತ್ತಿದ್ದರು. ಚನ್ನಗಿರಿ ಶಾಸಕರ ಪುತ್ರನ ಕಚೇರಿಯಲ್ಲಿ ನಡೆದಿರುವ ಲೋಕಾಯುಕ್ತ ದಾಳಿಗಿಂತ ಸಾಕ್ಷಿ ಬೇಕೇ? ಈಗಲಾದರೂ ಮುಖ್ಯಮಂತ್ರಿ ತಮ್ಮ ತಪ್ಪೊಪ್ಪಿಕೊಂಡು ರಾಜೀನಾಮೆ ನೀಡಬೇಕು. ಬಿಜೆಪಿಯ ಭ್ರಷ್ಟಾಚಾರ ಬಯಲಿಗೆಳೆದ ಲೋಕಾಯುಕ್ತ ಅಧಿಕಾರಿಗಳಿಗೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ,ಸಾರ್ವಜನಿಕ ವಲಯದಲ್ಲಿ ಇದು ಭ್ರಷ್ಟ ಸರ್ಕಾರ ಎಂಬ ಮಾತು ಕೇಳಿ ಬರುತ್ತಿದೆ. ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಯವರು ಈಗ ಏನು ಹೇಳುತ್ತಾರೆ. ಈಗ ಆಗಿರುವ ಬೆಳವಣಿಗೆ ನೋಡಿದರೆ ಅಮಿತ್ ಶಾ, ಭ್ರಷ್ಟಾಚಾರರಹಿತ ಸರ್ಕಾರ ಕೊಡುತ್ತೇವೆ ಎಂದು ಏಕೆ ಹೇಳಿದರು ಎಂಬುದು ಈಗ ಅರ್ಥವಾಗುತ್ತಿದೆ ಎಂದರು.
ಗೃಹ ಸಚಿವರು ನಾನು ದುರ್ಬಲ ಎನ್ನುತ್ತಾರೆ. ಹಾಗಾದರೆ ಶಾಸಕರನ್ನು ಬಂಧಿಸಲಿ ಎಂದು ಸವಾಲು ಹಾಕಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿರವರು ಪ್ರಾಮಾಣಿಕರೆನ್ನುತ್ತಾರೆ. ಈಗ ಅವರು ರಾಜೀನಾಮೆ ಕೊಡುವ ಕಾಲ ಬಂದಿದೆ. ಧೈರ್ಯವಿದ್ದರೆ ಮುಖ್ಯಮಂತ್ರಿಗಳು, ಮಂತ್ರಿಗಳು ರಾಜೀನಾಮೆ ಕೊಟ್ಟು ಚುನಾವಣೆಗೆ ಬರಲಿ ಜನ ತೀರ್ಮಾನ ಮಾಡುತ್ತಾರೆ ಎಂದರು.