ಬೆಳಗಾವಿ,ಜೂ.25-ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಮಹಾಲಕ್ಷ್ಮಿ ಸೊಸೈಟಿಗೆ ನುಗ್ಗಿ 3.5 ಕೆಜಿ ಚಿನ್ನ ಕಳವು ಮಾಡಿದ್ದ ನಾಲ್ವರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಹಾರೋಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಹುಸೇನ್ ಜಾತಗಾರ (40), ಮೂಡಲಗಿಯ ಸದ್ದಾಂ ಜಮಖಂಡಿ (22), ರಿಯಾಜ್ ಪೈಲ್ವಾನ್ (23), ಅಥಣಿ ತಾಲೂಕಿನ ಉಗಾರದ ಹಾಜೀಸಾಬ್ ಶೇಖ್ (36) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 1.40 ಕೋಟಿ ಮೌಲ್ಯದ 2.8 ಕೆಜಿ ಚಿನ್ನಾಭರಣ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಕಳೆದ ಮೇ 28ರಂದು ರಾಯಬಾಗ ತಾಲೂಕಿನ ಹಂದಿಗುಂದದ ಮಹಾಲಕ್ಷ್ಮಿ ಸೊಸೈಟಿಗೆ ಸಂಚು ರೂಪಿಸಿ ನುಗ್ಗಿದ್ದ ಬಂಧಿತರು 3.5 ಕೆಜಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿದ್ದರು. ಈ ಕುರಿತು ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ವಿಶೇಷ ತಂಡವು ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಮಾರು 25 ದಿನಗಳ ಸತತ ವಿಶೇಷ ತಂಡದ ಕಾರ್ಯಾಚರಣೆಗೆ ಯಶಸ್ಸು ದೊರೆತಿದ್ದು ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಮತ್ತೊಬ್ಬನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದರು.
ಹಾರೂಗೇರಿ, ಮೂಡಲಗಿ, ಅಥಣಿ, ಕುಡಚಿ ಪೊಲೀಸರ ನಾಲ್ಕು ತಂಡಗಳು ಯಶಸ್ವಿ ಕಾರ್ಯಾಚರಣೆ ನಡೆಸಿವೆ. ಈ ಪ್ರಕರಣ ತುಂಬಾ ಮುಖ್ಯವಾಗಿತ್ತು. ಏಕೆಂದರೆ ಕಷ್ಟಪಟ್ಟು ದುಡಿದ ರೈತರ, ಬಡವರ ಚಿನ್ನಾಭರಣಗಳು ಈ ಬ್ಯಾಂಕ್ನಲ್ಲಿದ್ದವು ಎಂದು ತಿಳಿಸಿದರು.