ಬೆಂಗಳೂರು,ಜ.12- ತನ್ನ ಮಗ ತನ್ನ ಪತಿಯನ್ನು ಹೋಲುತ್ತಾನೆ. ಮಗುವನ್ನು ನೋಡಿದಾಗಲೆಲ್ಲಾ ವಿಚ್ಚೇಧಿತ ಪತಿ ನೆನಪಿಗೆ ಬರುತ್ತಾರೆ ಎಂದು ಕ್ರೋಧಗೊಂಡು ತನ್ನ ಮಗುವನ್ನೇ ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ನಾಲ್ಕು ವರ್ಷದ ಮಗುವನ್ನು ಕೊಲೆ ಮಾಡಿ ಬಂಧಿತಳಾಗಿರುವ ಕೃತಕ ಬುದ್ಧಿಮತ್ತೆಯ ಸ್ಟಾರ್ಟ್ ಅಪ್ ಕಂಪೆನಿಯ ಸಿಇಒ ಸುಚನಾ ಸೇಠ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈ ಅಂಶ ಗೊತ್ತಾಗಿದೆ.
ತನಿಖಾ ತಂಡವು ಗೋವಾದಲ್ಲಿ ಸುಚನಾ ಸೇಠ್ ತಂಗಿದ್ದ ಹೋಟೆಲ್ ನಲ್ಲಿ ಪರಿಶೀಲನೆ ನಡೆಸಿದ್ದು ಅಲ್ಲಿ ಚಾಕು ಹಾಗೂ ಬ್ಯಾಗ್ ನಲ್ಲಿದ್ದ ಪತ್ರವೊಂದು ಪತ್ತೆಯಾಗಿದ್ದು ಅದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಸುಚನಾ ಸೇಠ್ ಮಾನಸಿಕ ಸ್ಥಿತಿಯ ಕುರಿತು ಹಲವು ಪ್ರಶ್ನೆಗಳು ಮೂಡತೊಡಗಿದ್ದು, ಈ ಬಗ್ಗೆ ಪರೀಕ್ಷೆ ನಡೆಸಿರುವ ಮನೋವೈದ್ಯರು ಯಾವುದೇ ಮಾಹಿತಿಗಳನ್ನೂ ಬಹಿರಂಗಪಡಿಸಿಲ್ಲ.
ಗೋವಾ ಪೊಲೀಸರು ಸುಚನಾಳನ್ನು ನಿನ್ನೆ ಗೋವಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪರೀಕ್ಷೆಗಾಗಿ ಕರೆದೊಯ್ದಿದ್ದು, ವೈದ್ಯರು ಪರೀಕ್ಷೆ ನಡೆಸಿದ್ದಾರೆ.
ಈ ನಡುವೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಆರೋಪಿ ನೆಲೆಸಿದ್ದ ಹೋಟೆಲ್ ರೂಮ್ ನಲ್ಲಿ (ಅಪರಾಧ ನಡೆದ ಸ್ಥಳ) ಚಾಕು ಹಾಗೂ ಬ್ಯಾಗ್ ನಲ್ಲಿ ಪತ್ರವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತನಿಖೆ ವೇಳೆ ಸುಚನಾ ಮಲಗಿದ್ದಾಗ ಮಗು ಸಾವನ್ನಪ್ಪಿದೆ ಎಂದು ಹೇಳಿಕೊಂಡಿದ್ದು, ಒಂದು ವೇಳೆ ಮಗು ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದರೆ, ಹೋಟೆಲ್ ಸಿಬ್ಬಂದಿ ಅಥವಾ ವೈದ್ಯರ ಸಹಾಯವನ್ನೇಕೆ ಕೇಳಲಿಲ್ಲ? ಮಗುವಿನ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ಇರಿಸಿ, ಮಗು ಇದೆ ಎಂದು ಏಕೆ ಬಿಂಬಿಸಲಾಗಿತ್ತು ಎಂದು ಪೊಲೀಸರು ವಿಚಾರಣೆ ವೇಳೆ ಪ್ರಶ್ನಿಸಿದ್ದಾರೆಂದು ತಿಳಿದುಬಂದಿದೆ.
ಇನ್ನು ಬ್ಯಾಗ್ ನಲ್ಲಿ ಪತ್ತೆಯಾದ ಪತ್ರದಲ್ಲಿ ತನ್ನ ಅತ್ತೆ-ಮಾವಂದಿರು ತನಗೆ ನೀಡಿದ ಕಿರುಕುಳದ ಬಗ್ಗೆ ಬರೆದಿರುವುದು ಕಂಡು ಬಂದಿದೆ.ಮಗುವಿನ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ಇರಿಸಿಕೊಂಡು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸುಚನಾ ಸಂಚಾರ ದಟ್ಟಣೆಯಿಂದಾಗಿ ಕ್ಯಾಬ್ ನಲ್ಲಿ 4 ಗಂಟೆಗಳ ಕಾಲ ಸಿಲುಕಿಕೊಂಡಿದ್ದಳು ಎಂಬ ವಿಚಾರ ಇದೀಗ ತಿಳಿದುಬಂದಿದೆ.
ಒಂದು ವೇಳೆ ಕ್ಯಾಬ್ ನಲ್ಲಿ ಸಿಲುಕಿಕೊಳ್ಳದೇ ಹೋಗಿದ್ದರೆ, ಆಕೆ ಬೆಂಗಳೂರು ತಲುಪಿ ಬಿಡುತ್ತಿದ್ದಳು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಏತನ್ಮಧ್ಯೆ, ಡಿಸೆಂಬರ್‌ನಲ್ಲಿ ತಮ್ಮ ಮಗನನ್ನು ಭೇಟಿಯಾಗಲು ಸುಚನಾ ತನ್ನ ಪತಿ ವೆಂಕಟ್ ರಾಮನ್ ಅವರಿಗೆ ಅವಕಾಶ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 7 ರಂದು ಗೋವಾದಲ್ಲಿದ್ದ ಸುಚನಾ ತನ್ನ ಗಂಡನ ವೀಡಿಯೊ ಕರೆಗೆ ಉತ್ತರಿಸಿದ್ದಳು. ಇದು ಮಗನೊಂದಿಗಿನ ರಾಮನ್ ಅವರು ಮಾತನಾಡಿದ್ದ ಕೊನೆಯ ಸಂಭಾಷಣೆಯಾಗಿತ್ತು ಎಂದು ತಿಳಿದುಬಂದಿದೆ.
ಪತಿ ಹೋಲುತ್ತಿದ್ದ ಮಗ:
ಗೋವಾ ಪೊಲೀಸರ ತನಿಖೆಯ ವೇಳೆ ಆಕೆಯ ಮಗುವಿನ ಮುಖ ಪತಿಯನ್ನೇ ಹೋಲುತ್ತಿತ್ತು ಇದೇ ಕಾರಣಕ್ಕೆ ಆಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮಗುವಿನ ಮುಖದ ಚಹರೆ ತನ್ನ ಪತಿಯ ಮುಖವನ್ನೇ ಹೋಲುತ್ತದೆ ಎಂದು ಮಹಿಳೆ ತನ್ನ ಸ್ನೇಹಿತರೊಂದಿಗೆ ಹಲವು ಬಾರಿ ಹೇಳಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಆತನನ್ನು ನೋಡಿದಾಗಲೆಲ್ಲಾ ನನಗೆ ನನ್ನ ಪತಿಯ ಮುಖ ಮತ್ತು ನಮ್ಮಿಬ್ಬರ ನಡುವಿನ ಹಳೆಯ ಸಂಬಂಧ ನೆನಪಿಗೆ ಬರುತ್ತದೆ ಎಂದು ಸುಚನಾ ಹೇಳಿಕೊಂಡಿದ್ದರು. ಇದೇ ಮಗುವಿನ ಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.