ಬೆಂಗಳೂರು, ಫೆ.4- ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್ (KEONICS) ಮೂಲಕ ನಡೆದಿರುವ ಖರೀದಿಯಲ್ಲಿ 430 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅವ್ಯವಹಾರ ನಡೆದಿದೆ ಎಂದು ಹೇಳಿರುವ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಈ ಬಗ್ಗೆ ತನಿಖೆಗೆ ನಿವೃತ್ತ ಐಎಎಸ್ ಅಧಿಕಾರಿ ಮೀನಾ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಿಯೋನಿಕ್ಸ್ (KEONICS) ವತಿಯಿಂದ ನಡೆದಿರುವ ಎಲ್ಲಾ ಖರೀದಿ, ಗುತ್ತಿಗೆ, ಹೊರ ರಾಜ್ಯಗಳಲ್ಲಿ ನಡೆದಿರುವ ಕೆಲಸ ಸೇರಿದಂತೆ ಎಲ್ಲವನ್ನೂ ಆರು ತಿಂಗಳ ಅವಧಿಯಲ್ಲಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಎರಡು ಮೂರು ತಿಂಗಳ ಹಿಂದೆ ಬಾಕಿ ಬಿಲ್ ಪಾವತಿಯಾಗುತ್ತಿಲ್ಲ ಎಂದು ಕೆಲವು ಗುತ್ತಿಗೆದಾರರು ಪ್ರತಿಭಟನೆ ನಡೆಸಿದ್ದರು. ಆಗ ಬಿಜೆಪಿಯ ಸಿ.ಎನ್.ಅಶ್ವಥ್ ನಾರಾಯಣ, ಆರ್.ಅಶೋಕ್ ಮತ್ತಿತರರು ನನ್ನ ರಾಜೀನಾಮೆ ಕೇಳಿದ್ದರು. ನಾನು ದಾಖಲೆಗಳ ಸಹಿತ ವಿಷಯ ಜನರ ಮುಂದಿಟ್ಟ ನಂತರ ಅವರ ಬಾಯಿ ಬಂದ್ ಆಗಿದೆ ಎಂದರು ಕಳೆದ ನಾಲ್ಕುವರೆ ವರ್ಷಗಳ ಬಿಜೆಪಿ ಆಡಳಿತದಲ್ಲಿದ್ದಾಗಲೇ ನಡೆದ ಖರೀದಿ ಮತ್ತಿತರ ಪ್ರಕ್ರಿಯೆಯಲ್ಲಿ 430 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆಡಿಟ್ ವರದಿ ತಿಳಿಸಿದೆ. ಇದನ್ನು ಅಶ್ವಥ್ ನಾರಾಯಣ ಅವರೇ ಓದಿಲ್ಲ. ಬಾಯಿಗೆ ಬಂದಂತೆ ಆರೋಪ ಮಾಡಿದರು. ಈಗ ಇದನ್ನು ಹೆಚ್ಚಿನ ತನಿಖೆಗೊಳಪಡಿಸಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಬಂದು 6 ತಿಂಗಳು ಕಳೆದಿರಲಿಲ್ಲ. ಯಾವುದೇ ಖರೀದಿಯೂ ಆಗಿರಲಿಲ್ಲ. ಆದರೂ ನಮ್ಮ ರಾಜೀನಾಮೆ ಕೇಳಿದ್ದರು. ಅವರು ಮಾಡಿದ ತಪ್ಪಿಗೆ ನಾನು ರಾಜೀನಾಮೆ ನೀಡಬೇಕು ಎಂಬುದು ಬಿಜೆಪಿಯವರ ವಾದವಾಗಿತ್ತು.ಈಗ ತನಿಖೆಯ ವರದಿ ಬರಲಿ ಯಾರು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಗೊತ್ತಾಗಲಿದೆ ಎಂದರು.
ಕಿಯೋನಿಕ್ಸ್‍ನ ಅವ್ಯವಹಾರದಲ್ಲಿ ಫಲಾನುಭವಿಗಳ್ಯಾರು?
ರಾಜಕಾರಣಿಗಳ ಮತ್ತು ಅಧಿಕಾರಿಗಳ ಪಾತ್ರವೆಷ್ಟು ಎಂಬುದನ್ನು ಪರಿಶೀಲಿಸಲಾಗುತ್ತದೆ. ಗುತ್ತಿಗೆದಾರರ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕರು ಈಗ ಉಸಿರೇ ಬಿಡುತ್ತಿಲ್ಲ. 430 ಕೋಟಿ ಯಾರ ಮನೆಯ ದುಡ್ಡು ಬಿಜೆಪಿಯವರು ಯಾರದೋ ದುಡ್ಡಿನಲ್ಲಿ ಯಲ್ಲಮ್ಮನ ಜಾತ್ರೆಯಲ್ಲ ಬಿಜೆಪಿ ಜಾತ್ರೆ ಮಾಡಿಕೊಂಡಿದ್ದಾರೆ. ಈ ಹಣದಲ್ಲಿಯೇ ಅವರು ಶಾಸಕರ ಖರೀದಿಯ ಆಪರೇಷನ್ ಕಮಲ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.