ಬೆಂಗಳೂರು, ಅ.26- ಹುಲಿ ಉಗುರು ಹೊಂದಿರುವ ಸರ ಧರಿಸಿರುವ ಪ್ರಕರಣದಲ್ಲಿ ಮುಜುಗರಕ್ಕೆ ಒಳಗಾಗಿರುವ ರಾಜ್ಯಸಭೆಯ ಬಿಜೆಪಿ ಸದಸ್ಯ ಹಾಗೂ ನಟ ಜಗ್ಗೇಶ್ (Jaggesh) ಈ ವಿಷಯವಾಗಿ ಅರಣ್ಯ ಇಲಾಖೆ ತಮಗೆ ನೀಡಿರುವ ನೋಟೀಸ್ ರದ್ದು ಪಡಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಜಗ್ಗೇಶ್ (Jaggesh) ಹೈಕೋರ್ಟ್ ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಮನೆ ಶೋಧ ನಡೆಸಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹುಲಿ ಉಗುರು ಹೊಂದಿರುವ ಸಂಬಂದ ತಮಗೆ ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ರದ್ದು ಪಡಿಸಬೇಕು. ನೋಟಿಸ್ಗೆ ಉತ್ತರಿಸುವ ಮೊದಲೇ 14 ಅಧಿಕಾರಿಗಳಿಂದ ದಾಳಿ ನಡೆದಿದೆ. ಪೂರ್ತಿ ಮನೆಯಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸಂದರ್ಶನದಲ್ಲಿ ಹೇಳಿದ ಮಾತನ್ನಾಧರಿಸಿ ತೇಜೋವಧೆ ಮಾಡಲಾಗಿದೆ. ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರವೆಂದು ಘೋಷಿಸಬೇಕು’ ಎಂಬುದಾಗಿ ಜಗ್ಗೇಶ್ ಪರ ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅರಣ್ಯಾಧಿಕಾರಿಗಳ ಕ್ರಮವನ್ನು ಅವರು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ.
ಹುಲಿ ಉಗುರು ಹೊಂದಿರುವ ವಿಡಿಯೋ ಮಾಹಿತಿಯನ್ನು ಆಧರಿಸಿ ಜಗ್ಗೇಶ್ (Jaggesh) ಮನೆಗೆ ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದಾರೆ. ಇದರಿಂದ ಅಸಮಾಧಾನಗೊಂಡ ಜಗ್ಗೇಶ್ ಅವರು ಕೋರ್ಟ್ ಮೊರೆ ಹೋಗಿ ಅರಣ್ಯಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಅರಣ್ಯಾಧಿಕಾರಿಗಳ ಕ್ರಮವನ್ನು ಕಾನೂನುಬಾಹಿರವೆಂದು ಘೋಷಿಸಲು ಮನವಿ ಮಾಡಿದ್ದಾರೆ.
ಜಗ್ಗೇಶ್ ಅವರು 20ನೇ ವಯಸ್ಸಿನಲ್ಲಿದ್ದಾಗ ಅವರ ತಾಯಿ ಹುಲಿಯ ಉಗುರಿನ ಪೆಂಡೆಂಟ್ನ ಉಡುಗೊರೆ ನೀಡಿದ್ದರು. ಇದು ಜಗ್ಗೇಶ್ ಕೊರಳಲ್ಲೇ ಇತ್ತು. ಈ ಬಗ್ಗೆ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದ ಬಳಿಕ ಜಗ್ಗೇಶ್ ಬಳಿಯೂ ಹುಲಿ ಉಗುರು ಇದೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿತ್ತು.
ಇದಾದ ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು,ಕಾನೂನು ದೊಡ್ಡದು. ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ. ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಇದು ಎಂದು ತಿಳಿಸಿದ್ದೇನೆ. ಎಷ್ಟೋ ದೋಚುವ ಮನುಷ್ಯರು, ದೇಶದ್ರೋಹಿಗಳು, ಕೊಲೆ ಪಾತಕರು, ಸಮಾಜ ಘಾತುಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡೋದೂ ಇಲ್ಲ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಒಂದು ವಿಷಯ ಅದ್ಭುತವಾಗಿ ಅರಿತೆ. ಪ್ರೀತಿಸುವವರು 1000 ಜನ ಇದ್ದರೂ ವಿಷಯವಿಲ್ಲದೆ ದ್ವೇಷ ಮಾಡುವ 100 ಜನರು ಇದ್ದೇ ಇರುತ್ತಾರೆ. ಒಂದು ವಿಷಯ ನೆನಪಿಟ್ಟುಕೊಳ್ಳಿ. ಒಳ್ಳೆಯ ಗುಣ, ನಡತೆ ಇದ್ದಾಗ ಕೊಲ್ಲೋಕೆ ಸಾವಿರಮಂದಿ ಬಂದರೂ ಕಾಯಲು ಒಬ್ಬ ಬರುತ್ತಾನೆ ಅವನೇ ದೇವರು. ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆಯದನ್ನು ಮಾಡಿ. ಅನ್ಯರಿಗೆ ಕೆಡುಕುಬಯಸಿ ಬಾಳಿದರೆ ನಾಶ’ ಎಂದು ಅವರು ಬರೆದಿದ್ದಾರೆ