ಬೆಂಗಳೂರು – ಕನ್ನಡ ಚಿತ್ರರಂಗದ ಮಳೆ ಹುಡುಗಿ ಖ್ಯಾತಿಯ ಪೂಜಾ ಗಾಂಧಿ (Pooja Gandhi) ಇತ್ತೀಚೆಗೆ ಹಲವು ಕಾರಣಗಳಿಂದ ಸುದ್ದಿ ಮಾಡುತ್ತಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಮುಂಗಾರು ಮಳೆ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ಪಂಜಾಬ್ ಮೂಲದ ನಟಿ ಪೂಜಾ ಗಾಂಧಿ, ತಾವು ಕನ್ನಡ ಕಲಿಯುವುದಷ್ಟೇ ಅಲ್ಲದೆ ಉತ್ತರ ಭಾರತದ ಹಲವು ಆಸಕ್ತರಿಗೆ ಕನ್ನಡ ಕಲಿಸುವ ವ್ಯವಸ್ಥೆ ಕಲ್ಪಿಸುವ ಮೂಲಕ ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಪೂಜಾಗಾಂಧಿ ಅದರಲ್ಲೂ ಹೊಸತನ ತೋರುವ ಮೂಲಕ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯ ವಿಜಯ್ ಘೋರ್ಪಡೆ ಅವರೊಂದಿಗೆ ನಾಳೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಅವರು ರಾಷ್ಟ್ರಕವಿ ಕುವೆಂಪು ಅವರು ನಾಡಿಗೆ ನೀಡಿದ ಮಂತ್ರ ಮಾಂಗಲ್ಯದ ಮೂಲಕ ವಿವಾಹ ಜೀವನ ಪ್ರವೇಶಿಸುತ್ತಿದ್ದಾರೆ ಈ ಮೂಲಕ ಪೂಜಾ ಗಾಂಧಿಯವರ ನಡೆ ಎಲ್ಲರ ಗಮನ ಸೆಳೆದಿದೆ.
ಸಿನಿಮಾ ತಾರೆಯರ ಮದುವೆ ಎಂದರೆ ಅದೊಂದು ಅದ್ದೂರಿ ಹಾಗೂ ವೈಭವದಿಂದ ನಡೆಯುವ ಸಮಾರಂಭ ಎಂದೇ ಪ್ರತೀತಿ. ಈ ಸಮಾರಂಭಕ್ಕೆ ಹಲವಾರು ಖ್ಯಾತನಾಮರು ಸಾಕ್ಷಿಯಾಗುವ ಮೂಲಕ ಇಡೀ ವಿದ್ಯಮಾನ ಅದ್ದೂರಿತನದಿಂದ ಕೂಡಿರುವಂತಾಗುತ್ತದೆ. ಆದರೆ ಪೂಜಾ ಗಾಂಧಿ ಇಂತಹ ಎಲ್ಲ ವೈಭವ ಅದ್ದೂರಿ ಸಮಾರಂಭಗಳಿಂದ ಹೊರತಾಗಿ ತಮ್ಮ ಮದುವೆ ಇರಬೇಕೆಂದು ನಿರ್ಧರಿಸಿ ಅದರಂತೆ ಕುವೆಂಪು ಅವರ ಮಂತ್ರ ಮಾಂಗಲ್ಯದ ಮೂಲಕ ಆಯ್ದ ಕೆಲವೇ ಕೆಲವು ಗಣ್ಯರ ಸಮುಖದಲ್ಲಿ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ ಬಾಲಿವುಡ್, ಕಾಲಿವುಡ್‌ನಲ್ಲಿ ನಟಿಸಿದ್ದ ಪೂಜಾ ಅವರ ಸಿನಿ ಬದುಕಿಗೆ ತಿರುವು ನೀಡಿದ್ದು, ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆ. ಈ ಸಿನಿಮಾ ಬಳಿಕ ಮಳೆ ಹುಡುಗಿ ಎಂದೇ ಖ್ಯಾತಿ ಪಡೆದ ಇವರು ನಂತರದಲ್ಲಿ ಸಾಲು ಸಾಲಾಗಿ ಹಲವು ಸಿನಿಮಾಗಳಲ್ಲಿ ನಟಿಸಿದರು.ಇದರಲ್ಲಿ ‘ಮಿಲನ’, ‘ಕೃಷ್ಣ’ ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳು ಹಿಟ್ ಆದವು.
ಜೊತೆಗೆ ತಮಿಳು ಸಿನಿಮಾಗಳಲ್ಲೂ ಕಾಣಿಸಿಕೊಂಡರು. ‘ದಂಡುಪಾಳ್ಯ’, ‘ಅಭಿನೇತ್ರಿ’ ಸಿನಿಮಾಗಳ ಬಳಿಕ ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು. 2020ರ ಆರಂಭದಲ್ಲಿ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಈ ಅವಧಿಯಲ್ಲಿ ನಟನೆಯಿಂದ ದೂರವೇ ಉಳಿದಿದ್ದರು. ಇತ್ತೀಚೆಗೆ ‘ಸಂಹಾರಿಣಿ’ ಎಂಬ ಚಿತ್ರದಲ್ಲಿ ಪೂಜಾ ಕಾಣಿಸಿಕೊಂಡಿದ್ದರು.
ಈ ಹಿಂದೆ ಆನಂದ್ ಗೌಡ ಎಂಬುವರೊಂದಿಗೆ ನಿಶ್ಚಿತಾರ್ಥ ನಡೆದಿತ್ತಾದರೂ ಅದು ಮುರಿದು ಬಿದ್ದಿತ್ತು.