ಬೆಂಗಳೂರು,ಫೆ.6-
ಅದಾನಿ ಸಮೂಹ ಸಂಸ್ಥೆಯ (Adani Group Companies) ಹೂಡಿಕೆ ಮತ್ತು ಸಾಲ ಹಗರಣವನ್ನು ಸಂಸತ್ತಿನ ಜಂಟಿ ಸದನ ಸಮಿತಿಯ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ Congress ಮತ್ತು ಇತರೆ ಪ್ರತಿಪಕ್ಷಗಳು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿವೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದರೆ ಹಲವೆಡೆ SBI ಬ್ಯಾಂಕ್‍ಗಳು ಹಾಗೂ LIC ಶಾಖೆಗಳ ಮುಂದೆ ಪ್ರತಿಭಟನೆ ನಡೆಸಿದರು. ಅದಾನಿ ಗುಂಪಿನ ಹಗರಣವನ್ನು ಸಂಸತ್ತಿನ ಜಂಟಿ ಸದನ ಸಮಿತಿ ಅಥವಾ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಘೋಷಣೆ ಕೂಗಿ ಬ್ಯಾನರ್ ಪ್ರದರ್ಶನ ಮಾಡಿದರು.
ಮೈಸೂರು ಬ್ಯಾಂಕ್ ವೃತ್ತ (Mysore Bank Circle) ದಲ್ಲಿ KPCC ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ರವರ ನೇತೃತ್ವದಲ್ಲಿ ಸೇರಿದ ಬೆಂಗಳೂರು ಕೇಂದ್ರ, ದಕ್ಷಿಣ ಹಾಗೂ ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ನೂರಾರು ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಮಲಿಂಗಾರೆಡ್ಡಿ ಮಾತನಾಡಿ ‘ಅದಾನಿ ಸಮೂಹದಲ್ಲಿ LIC 36 ಸಾವಿರ ಕೋಟಿ ಹೂಡಿಕೆ ಮಾಡಿದ್ದರೆ, SBI 80 ಸಾವಿರ ಕೋಟಿ ರೂ ಸಾಲ ನೀಡಿದ್ದು, ಈ ಬಗ್ಗೆ ಪ್ರಧಾನಿ ಮೋದಿ ಬಾಯಿ ಬಿಡುತ್ತಿಲ್ಲ’ ಎಂದು ದೂರಿದರು. ‘ಅದಾನಿ ಬೆಂಬಲಕ್ಕೆ Modi ನಿಂತಿದ್ದು, ಅದರಿಂದಾಗಿ ಮೋದಿ ಉದ್ಯಮಿಗಳ 10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ. ಈ ಹಣವೆಲ್ಲಾ ಯಾರದ್ದು?’ ಎಂದು ಪ್ರಶ್ನಿಸಿದರು. ‘ಜನ ಸಾಮಾನ್ಯರ ಉಳಿತಾಯದ ಹಣವನ್ನು ಮೋದಿ ಸರ್ಕಾರ ಉಳ್ಳವರಿಗೆ ನೀಡುತ್ತಿದೆ. ಅದಾನಿ ಸಮೂಹದ ಹಗರಣ ಕುರಿತು ತನಿಖೆಗೆ ಒತ್ತಾಯಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದರು. ‘ಕೇಂದ್ರ ಸರ್ಕಾರಿ ಸ್ವಾಮ್ಯದ ವಿಮಾ ಕಂಪೆನಿ ಎಲ್‍ಐಸಿ ಅದಾನಿ ಕಂಪನಿಗಳ ಷೇರುಗಳ ಮೇಲೆ 29 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಸಾರ್ವಜನಿಕ ಹಣಕಾಸು ಬ್ಯಾಂಕ್ ಆಗಿರುವ ಎಸ್‍ಬಿಐನಿಂದ ಅದಾನಿ ವ್ಯವಹಾರಗಳಿಗೆ 27 ಸಾವಿರ ಕೋಟಿ ರೂಪಾಯಿ ಸಾಲ ನೀಡಿದೆ. ಅನುಚಿತ ಮಾರ್ಗದಲ್ಲಿ ಅದಾನಿ ಸಮೂಹ ವಹಿವಾಟು ನಡೆಸುತ್ತಿದೆ ಎಂದು ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಂಡೆನ್ಬರ್ಗ್ ವರದಿ ಮಾಡಿದ ಬಳಿಕ ಅದಾನಿ ಕಂಪನಿಯ ಷೇರು ಮೌಲ್ಯ ಕುಸಿಯಲಾರಂಭಿಸಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳಿಗೆ ಸುಮಾರು ಒಂದು ಬಿಲಿಯನ್ ಡಾಲರ್ ನಷ್ಟವಾಗಿದೆ ಎಂಬ ಅಂದಾಜುಗಳಿವೆ’ ಎಂದು ಪ್ರತಿಭಟನಾ ನಿರತರು ಆಪಾದಿಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ರಾಜ್‍ಕುಮಾರ್, ಮಾಜಿ ಮಹಾಪೌರರಾದ ಮಂಜುನಾಥ್ ರೆಡ್ಡಿ, ಗಂಗಾಂಭಿಕೆ, ಉದಯ್‍ಶಂಕರ್ ಸೇರಿ ಕೆಪಿಸಿಸಿ ಪದಾಧಿಕಾರಿಗಳು, ಮಾಜಿ ಮಹಾಪೌರರುಗಳು, ಪಕ್ಷದ ಹಿರಿಯ ಮುಖಂಡರುಗಳು ಭಾಗವಹಿಸಿದ್ದರು.