ಬೆಂಗಳೂರು
‘ಭಾರತ ರಕ್ಷಣಾ ವ್ಯವಹಾರ ಕೇವಲ ಮಾರುಕಟ್ಟೆ ಮಾತ್ರ ಅಲ್ಲ ಅದು ಅಭಿವೃದ್ಧಿಯ ಪಾಲುದಾರ ಕೂಡ ಆಗಿದೆ. ನಮ್ಮ ರಕ್ಷಣಾ ತಂತ್ರಜ್ಞಾನ ಜಗತ್ತಿನಲ್ಲೇ ಪ್ರಭಾವಶಾಲಿಯಾಗಿದೆ. ಇದರಿಂದ ದೇಶವು ಪ್ರಾಮಾಣಿಕ ಹಾಗೂ ಸದೃಢವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ. ಯಲಹಂಕ ವಾಯುನೆಲೆ (Yelahanka air base) ಯಲ್ಲಿ ಇಂದಿನಿಂದ ಫೆಬ್ರವರಿ 17ರವರೆಗೆ ಒಟ್ಟು 35 ಸಾವಿರ ಚದರ ಮೀಟರ್ ಪ್ರದೇಶದಲ್ಲಿ ನಡೆಯಲಿರುವ ‘ಏರೋ ಇಂಡಿಯಾ–2023′ (Aero India Show – 2023) ಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai) ಸೇರಿದಂತೆ ಹಲವು ಗಣ್ಯರೊಂದಿಗೆ ಸಮಾರಂಭದ ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಲಿಕಾಪ್ಟರ್ಗಳು ತ್ರಿವರ್ಣ ಧ್ವಜ, ಸೇನೆ ಧ್ವಜ ಹಾಗೂ ಏರೋ ಇಂಡಿಯಾ ಧ್ವಜ ಹಾಗೂ ಸೂರ್ಯ ಕಿರಣ್ (Surya Kiran) ತ್ರಿವರ್ಣ ಬಣ್ಣದ ಮೂಲಕ ಸ್ವಾಗತಿಸಿದವು.
ಇದರಿಂದ ಪುಳಕಿತರಾಗಿ ಮಾತು ಆರಂಭಿಸಿದ ಅವರು, ‘ಏರೋ ಇಂಡಿಯಾ ಕೇವಲ ಪ್ರದರ್ಶನ ಎಂದು ಪರಿಗಣಿಸುತ್ತಿದ್ದ ಕಾಲವೊಂದಿತ್ತು. ಕಳೆದ ಕೆಲವು ವರ್ಷಗಳಲ್ಲಿ, ದೇಶವು ಈ ಗ್ರಹಿಕೆಯನ್ನು ಬದಲಾಯಿಸಿದೆ. ಈಗ ಇದು ಕೇವಲ ಪ್ರದರ್ಶನವಲ್ಲ. ಭಾರತದ ಶಕ್ತಿಯಾಗಿದೆ. ಇದು ಭಾರತೀಯ ರಕ್ಷಣಾ ಉದ್ಯಮದ ವ್ಯಾಪ್ತಿ ಮತ್ತು ಆತ್ಮ ವಿಶ್ವಾಸದ ಪ್ರತೀಕವಾಗಿದೆ’ ಎಂದು ಹೇಳಿದರು.
‘ಈ ಪ್ರದರ್ಶನ ಭಾರತದ ಸಾಮರ್ಥ್ಯಗಳನ್ನು ವಿಸ್ತರಿಸುವ ಒಂದು ಉದಾಹರಣೆಯಾಗಿದೆ. ಇಲ್ಲಿ ಸುಮಾರು 100 ರಾಷ್ಟ್ರಗಳ ಉಪಸ್ಥಿತಿಯು ಭಾರತದ ಮೇಲಿನ ವಿಶ್ವದ ನಂಬಿಕೆಯನ್ನು ಹೆಚ್ಚಿಸಿದೆ ಎಂದು ತೋರಿಸುತ್ತದೆ. ಭಾರತ ಮತ್ತು ವಿಶ್ವದ 700ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ’ ಎಂದು ತಿಳಿಸಿದರು.
ಆನಂತರ ಆಗಸದಲ್ಲಿ ಲೋಹದ ಹಕ್ಕಿಗಳ ಪ್ರದರ್ಶನ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಸೂರ್ಯಕಿರಣ್, ಹೆಲಿಕಾಪ್ಟರ್ ಗಳ ಕಸರತ್ತು ಕರತಾಡನಕ್ಕೆ ಪಾತ್ರವಾದರೆ ನೇರವಾಗಿ ನಭಕ್ಕೆ ಚಿಮ್ಮಿದ ತೇಜಸ್ ನ (Tejas) ಸಾಮರ್ಥ್ಯ ನಿಬ್ಬೆರಗಾಗಿಸಿತು. ಸುಮಾರು ಒಂದು ಗಂಟೆಗಳ ಕಾಲ ನಭದಲ್ಲಿ ನಡೆದ ಲೋಹದ ಹಕ್ಕಿಗಳ ಚಮತ್ಕಾರ ಭಾರತದ ವೈಮಾನಿಕ ಸಾಮರ್ಥ್ಯದ ಧೀ ಶಕ್ತಿಯನ್ನು ಪರಿಚಯಿಸಿತು.
1996ರಲ್ಲಿ ಆರಂಭವಾದ ವೈಮಾನಿಕ ಕ್ಷೇತ್ರದ ಶಕ್ತಿ ಪ್ರದರ್ಶನವು ದ್ವೈವಾರ್ಷಿಕವಾಗಿ ನಡೆಯುತ್ತಿದ್ದು, ಇದು 14ನೇ ಆವೃತ್ತಿ. ಏಷ್ಯಾದಲ್ಲೇ ಅತಿ ದೊಡ್ಡ ರಕ್ಷಣಾ ಮತ್ತು ವೈಮಾನಿಕ ಪ್ರದರ್ಶನ ಇದಾಗಿದ್ದು, ದೇಶದ ಯುದ್ಧ ವಿಮಾನಗಳು, ಹೆಲಿಕಾಪ್ಟರ್ ಗಳು, ರಕ್ಷಣಾ ಉಪಕರಣಗಳು ಮತ್ತು ವೈಮಾನಿಕ ಕ್ಷೇತ್ರದ ಸಾಧನೆಗಳನ್ನು ಬಿಂಬಿಸಲಿದೆ. ವೈಮಾನಿಕ ಕ್ಷೇತ್ರದ ಉದ್ಯಮದ ಸಾಮರ್ಥ್ಯಗಳು, ಉತ್ಪನ್ನಗಳು ಮತ್ತು ಸೇವೆಗಳ ಪ್ರದರ್ಶನಕ್ಕೆ ಇದು ಅತಿ ದೊಡ್ಡ ವೇದಿಕೆಯಾಗಿದೆ.