ಬಡತನ, ದಾಸ್ಯ, ದಬ್ಬಾಳಿಕೆಗಳನ್ನು ಮೆಟ್ಟಿನಿಲ್ಲಲು ಕ್ರಾಂತಿಯಿಂದ ಮಾತ್ರ ಸಾಧ್ಯ ಎಂದು ಬಲವಾಗಿ ನಂಬಿದ್ದ ಕ್ರಾಂತಿಕಾರಿ, ಇಡೀ ವಿಶ್ವದಲ್ಲಿರುವ ಬಡತನಕ್ಕೆ ಬಂಡವಾಳಶಾಹಿತನವೇ ಮೂಲ ಕಾರಣ ಎಂಬ ಸಿದ್ಧಾಂತ ಹೊಂದಿದ್ದ ಮಾರ್ಕ್ಸ್ ವಾದಿ, ಸಮಾಜದಲ್ಲಿ ಸಮಾನತೆಯನ್ನು ಕಾಣಬೇಕೆಂದರೆ ಬಂಡವಾಳಶಾಹಿತನವನ್ನು ಮತ್ತು ಸಾಮ್ರಾಜ್ಯಶಾಹಿತ್ವವನ್ನು ಬುಡಸಮೇತ ಕಿತ್ತೆಸೆಯಲೇಬೇಕು ಎಂದು ಪಣತೊಟ್ಟಿದ್ದ ಹಠವಾದಿ, ಇಡೀ ಸಮಾಜವೂ ಒಂದು ಸಮುದಾಯದಂತೆ, ಒಟ್ಟಾಗಿ ನಡೆಯಬೇಕು,ಒಟ್ಟಾಗಿ ಬೆಳೆಯಬೇಕು, ಒಟ್ಟಾಗಿ ಬದುಕಬೇಕು ಎಂದು ಸಮಾಜದ ಒಳಿತಿಗಾಗಿ ಹೋರಾಡಿದ ಸಮಾಜವಾದಿ, ಪ್ರತಿಯೊಬ್ಬನಿಗೂ ಶಿಕ್ಷಣವೇ ನಿಜವಾದ ಆಸ್ತಿ, ಅದರಿಂದಲೇ ಪ್ರತಿಯೊಬ್ಬನ ಒಳಗೂ ಸ್ವ ಚೇತನ ಹುಟ್ಟುವುದು, ಮತ್ತದು ಕ್ರಾಂತಿಗೆ ಪ್ರೇರೇಪಿಸುವುದು ಎಂದು ಪ್ರತಿಪಾದಿಸಿದ್ದ ಹೋರಾಟಗಾರ, ಅಪಾರ ಜ್ಞಾನ ಹೊಂದಿದ್ದ ಬುದ್ಧಿಜೀವಿ, ತಮ್ಮ ಆದರ್ಶಗಳಿಂದ ಹಲವು ಕ್ರಾಂತಿಗಳಿಗೆ ನಾಂದಿ ಹಾಡಿ, ಬದಲಾವಣೆಯ ಬೆಳಕು ತೋರಿದವರೇ ಕ್ಯೂಬನ್ ಕ್ರಾಂತಿಯ ಪ್ರಮುಖ ಕ್ರಾಂತಿಕಾರಿ ನಾಯಕ “ಚೆ ಗೆವಾರ” (Che Guevara). ಎಷ್ಟು ವರ್ಷ ಬದುಕಿದೆವು ಎನ್ನುವುದಕ್ಕಿಂತ ಹೇಗೆ ಬದುಕಿದೆವು ಎನ್ನುವುದು ಮುಖ್ಯ ಎಂಬ ಮಾತಿಗೆ ಕನ್ನಡಿ ಹಿಡಿದಂತಿದೆ ಇವರ ಜೀವನ. ಬದುಕಿದ್ದ ಕೆಲವು ವರ್ಷಗಳಲ್ಲೇ ಶತ ಶತಮಾನಗಳವರೆಗೂ ಎಲ್ಲರ ಸ್ಮೃತಿಯಲ್ಲಿಯೂ ಸದಾ ಹಸಿರಾಗಿರುವಂಥ ಸಾಧನೆಗೈದ ಇವರ ಹೋರಾಟದ ಜೀವನ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.
ಸಾಧಕನ ಜೀವನದ ಒಂದು ಪಕ್ಷಿನೋಟ: (14 ಜೂನ್ 1928 – 9 ಅಕ್ಟೋಬರ್ 1967)
ಇವರು 1928 ನೇ ಇಸವಿಯ ಜೂನ್ 14 ರಂದು ಅರ್ಜೆಂಟೀನಾದ ರೊಸಾರಿಯೊ (Rosario, Argentina) ನಲ್ಲಿ ಜನಿಸಿದರು. ಚೆ ಗೆವಾರ ಎಂದು ಪ್ರಖ್ಯಾತರಾಗಿರುವ ಇವರ ನಿಜವಾದ ಹೆಸರು ಅರ್ನೆಸ್ಟೊ ಗೆವಾರ ಡೆ ಲಾ ಸೆರ್ನಾ (Ernesto Guevara de la Serna). ಬಾಲ್ಯದ ದಿನಗಳಿಂದಲೇ ಇವರಿಗೆ ಆಸ್ತಮಾ ಸಮಸ್ಯೆ ಕಾಡುತಿತ್ತು. ಹೋರಾಟ ಎನ್ನುವುದು ಇವರ ರಕ್ತದಲ್ಲೇ ಬೆಸೆದಿತ್ತೇನೋ, ಜೀವನ ಪೂರ್ತಿ ಕಾಡಿದ ಅಂಥಾ ಅತಿ ಆಸ್ತಮಾದ ವಿರುದ್ಧ ಹೋರಾಡುತ್ತಲೇ ಈಜು, ಫುಟ್ಬಾಲ್, ಗೋಲ್ಫ್, ಸೈಕ್ಲಿಂಗ್, ರಗ್ಬಿ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಉತ್ಕೃಷ್ಟ ಸಾಧನೆ ತೋರಿದ ಹಿರಿಮೆ ಇವರದ್ದು.
ಚಿಕ್ಕಂದಿನಿಂದಲೇ ಇವರಿಗೆ ಓದುವುದು ಎಂದರೆ ಎಲ್ಲಿಲ್ಲದ ಆಸಕ್ತಿ. ಬಹಳ ಸಣ್ಣ ವಯಸ್ಸಿನಿಂದಲೇ ಓದಲು ಆರಂಭಿಸಿದ ಇವರು, ಕಾರ್ಲ್ ಮಾರ್ಕ್ಸ್ (Karl Marx), ವ್ಲಾಡಿಮಿರ್ ಲೆನಿನ್ (Vladimir Lenin), ಮಹಾತ್ಮಾ ಗಾಂಧಿ (Mahatma Gandhi), ಜವಾಹರಲಾಲ್ ನೆಹರು (Jawaharlal Nehru) ಸೇರಿದಂತೆ ಹಲವಾರು ನಾಯಕರ ಜೀವನಗಾಥೆಯನ್ನು ಓದಿದ್ದರು.
1948 ರಲ್ಲಿ ವೈದ್ಯಕೀಯ ಅಧ್ಯಯನ ಮಾಡಲು ಇವರು ಬೂನೋಸ್ ಏರೀಸ್ ಯುನಿವರ್ಸಿಟಿಯಲ್ಲಿ (Buenos Aires University) ಪ್ರವೇಶ ಪಡೆದರು. ಆಗಷ್ಟೇ, ಅಂದರೆ 1945 ರಲ್ಲಿ, ಎರಡನೇ ಮಹಾಯುದ್ಧ ಮುಗಿದಿತ್ತಾದ್ದರಿಂದ, ವಿಶ್ವದೆಲ್ಲೆಡೆ ಹಲವು ರಾಷ್ಟ್ರಗಳಲ್ಲಿ ಹಲವು ಕ್ರಾಂತಿಗಳು, ಬದಲಾವಣೆಗಳು ನಡೆಯುತ್ತಿದ್ದವು. ಇದೇ ಸಮಯದಲ್ಲಿ, ಎರಡು ಬಾರಿ ಇವರು ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಪ್ರವಾಸ ಕೈಗೊಂಡರು, ಅದೂ ಅವರ ಪ್ರೀತಿಯ ಬೈಕಿನಲ್ಲಿ. ಪ್ರವಾಸ ಮಾಡುವುದು, ಜಗತ್ತನ್ನು ನೋಡುವುದು, ವಾಸ್ತವವನ್ನು ತಿಳಿಯುವುದು ಎಂದರೆ ಇವರ ಇಷ್ಟದ ಕೆಲಸವಾಗಿತ್ತು. ಇವರ ಜೀವನದ ಧ್ಯೇಯವನ್ನು ಬರೆದದ್ದೇ ಈ ಎರಡು ಪ್ರವಾಸಗಳು. ಮಧ್ಯ ಮತ್ತು ದಕ್ಷಿಣ ಅಮೆರಿಕಾವನ್ನು ಸುತ್ತುತ್ತಾ, ಅಲ್ಲಿಯ ಜನರ ಮೇಲಾಗುತ್ತಿದ್ದ ದಬ್ಬಾಳಿಕೆ, ಕಿತ್ತು ತಿನ್ನುವ ಬಡತನ, ಸಾಮ್ರಾಜ್ಯಶಾಹಿತ್ವ, ಜನರ ದೀನ ಬದುಕನ್ನು ಅವರು ಕಂಡರು. ಅಸಮಾನತೆಯ ಬದುಕನ್ನು ಕಂಡ ಮೇಲೆ, ಸಮಾಜದಲ್ಲಿ ಸಮಾನತೆಯನ್ನು ತರಬೇಕು, ಮತ್ತದು ಕ್ರಾಂತಿಯಿಂದಲೇ ಸಾಧ್ಯ ಎಂದು ಪಣ ತೊಟ್ಟರು ಮಾರ್ಕ್ಸ್ ವಾದಿ ಚೆ ಗೆವಾರ. ಪ್ರವಾಸದ ಅನುಭವಗಳನ್ನು ಅವರು ಪುಸ್ತಕದಲ್ಲಿ ದಾಖಲಿಸಿದ್ದರು. 1992 ರಲ್ಲಿ ಅವರ ಅನುಭವಗಳನ್ನು ಹೊತ್ತ “The Motorcycle Diaries” ಪುಸ್ತಕವನ್ನು ಪ್ರಕಟಿಸಲಾಯಿತು ಮತ್ತದು ನ್ಯೂ ಯಾರ್ಕ್ ನ (New York) ಬೆಸ್ಟ್ ಸೆಲ್ಲರ್ ಪುಸ್ತಕವಾಗಿ ಹೊರಹೊಮ್ಮಿದ್ದು ಈಗ ಇತಿಹಾಸ.
1955 ರಲ್ಲಿ ಮೆಕ್ಸಿಕೋ (Mexico) ದಲ್ಲಿ ಮತ್ತೊಬ್ಬ ಕ್ರಾಂತಿಕಾರಿ ನಾಯಕನಾಗಿದ್ದ ಫಿಡೆಲ್ ಕ್ಯಾಸ್ಟ್ರೋ (Fidel Castro) ರನ್ನು ಚೆ ಗೆವಾರ ಭೇಟಿ ಮಾಡಿದರು. ಫಿಡೆಲ್ ಕ್ಯಾಸ್ಟ್ರೋ ಅದಾಗಲೇ, ಕ್ಯೂಬಾ (Cuba) ದೇಶದ ಸರ್ವಾಧಿಕಾರಿಯಾಗಿದ್ದ ಫಲ್ಜೆನ್ಸಿಯೋ ಬಟಿಸ್ಟಾ (Fulgencio Batista) ವಿರುದ್ಧ ಹೋರಾಟವನ್ನು ನಡೆಸಿದ್ದರು. ಫಲ್ಜೆನ್ಸಿಯೋ ಬಟಿಸ್ಟಾ ಅವರಿಗೆ ಅಮೆರಿಕಾದ ಬೆಂಬಲವಿತ್ತು. ಅತಿ ಅಮಾನವೀಯತೆಯಿಂದ ಕೂಡಿದ್ದ ಬಟಿಸ್ಟಾ ಆಳ್ವಿಕೆಯನ್ನು ವಿರೋಧಿಸಿ, ಕ್ಯೂಬಾ ದೇಶವನ್ನು ಸ್ವತಂತ್ರಗೊಳಿಸಲು ಫಿಡೆಲ್ ಕ್ಯಾಸ್ಟ್ರೋ ಆರಂಭಿಸಿದ್ದ “26th July Movement” ಎಂಬ ಹೋರಾಟದಲ್ಲಿ ಚೆ ಗೆವಾರ ಸಕ್ರಿಯವಾಗಿ ಭಾಗವಹಿಸಿದ್ದರು. ನಂತರದ ದಿನಗಳಲ್ಲಿ ನಡೆದ ಗೆರಿಲ್ಲಾ ಯುದ್ಧ (Guerrilla warfare) ದ ಗೆಲುವಿನಲ್ಲಿಯೂ ಇವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಕ್ಯಾಸ್ಟ್ರೋ ಮತ್ತು ಗೆವಾರ ಜೋಡಿಯ ಕ್ರಾಂತಿಯ ಫಲವಾಗಿ ಕ್ಯೂಬಾ ದೇಶವು ಬಟಿಸ್ಟಾ ಆಳ್ವಿಕೆಯಿಂದ ಸ್ವತಂತ್ರಗೊಂಡಿತು.
1959 ರಲ್ಲಿ ಫಿಡೆಲ್ ಕ್ಯಾಸ್ಟ್ರೋ ಕ್ಯೂಬಾ ದೇಶದ ಅಧಿಕಾರವನ್ನು ವಹಿಸಿದರು. 1961 ರ ವರೆಗೆ National Bank Of Cuba ದ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸಿದ ಚೆ ಗೆವಾರ, ತದನಂತರ ಕೈಗಾರಿಕಾ ಮಂತ್ರಿಯಾಗಿಯೂ ಕೂಡ ಕಾರ್ಯ ನಿರ್ವಹಿಸಿದರು. ಈ ಅವಧಿಯಲ್ಲಿ, ಅವರು ಸಾಕಷ್ಟು ಸುಧಾರಣೆಗಳನ್ನು ತಂದರು. ಭೂ ಕಾಯ್ದೆ (Land Act Reform) ಗಳಲ್ಲಿ ಸುಧಾರಣೆ ತಂದರು, ಶಿಕ್ಷಣವನ್ನು ಅತಿಯಾಗಿ ಗೌರವಿಸುತ್ತಿದ್ದ ಇವರು, ಎಲ್ಲರಿಗೂ ಶಿಕ್ಷಣವನ್ನು ನೀಡುವ ಸವಲತ್ತುಗಳನ್ನೂ ಮಾಡಿದರು. ಕೈಗಾರಿಕೆಗಳನ್ನು ಮತ್ತು ಬ್ಯಾಂಕ್ ಗಳನ್ನು ರಾಷ್ಟ್ರೀಕರಣ (Nationalization of industries and banks) ಮಾಡಿದರು. ಇವೆಲ್ಲದರ ನಡುವೆ, ದೇಶದ ವ್ಯಾಪಾರ ವಹಿವಾಟುಗಳನ್ನು ಅಮೆರಿಕಾದೊಂದಿಗೆ ತಪ್ಪಿಸಿ, ಸೋವಿಯತ್ ಯೂನಿಯನ್ (Soviet Union) ನೊಂದಿಗೆ ಬೆಸೆಯಲು ನಿರ್ಧರಿಸಿದರು. ಅಮೆರಿಕಾದ ವ್ಯಾಪಾರ ನಿರ್ಬಂಧಗಳು, ಕೆಲವು ವಿಫಲಗೊಂಡ ಯೋಜನೆಗಳಿಂದ ಕ್ಯೂಬಾದ ಆರ್ಥಿಕತೆ ಕುಸಿಯುತ್ತಾ ಬಂದಿತು. ಈ ಮಧ್ಯೆ, ಚೆ ಗೆವಾರ ಕೆಲವು ಕ್ಯೂಬನ್ ನಾಯಕರ ವಿರೋಧವನ್ನೂ ಕಟ್ಟಿಕೊಳ್ಳಬೇಕಾಯಿತು.
1965 ರಲ್ಲಿ ಕ್ಯೂಬಾ ದೇಶದ ಆಡಳಿತದಲ್ಲಿ ತಮ್ಮ ಸ್ಥಾನವನ್ನು ತ್ಯಜಿಸಿ, ತಮ್ಮ ಕ್ರಾಂತಿಯ ಆದರ್ಶಗಳನ್ನು ಇತರ ಹಲವು ರಾಷ್ಟ್ರಗಳಲ್ಲೂ ಪ್ರಯೋಗಿಸಿ ಸಮಾಜದಲ್ಲಿ ಸುಧಾರಣೆಯನ್ನು ತರುವ ಉದ್ದೇಶದಿಂದ ಕ್ಯೂಬಾ ದೇಶದಿಂದ ಹೊರನಡೆದರು. ನಂತರ ಕೆಲವು ತಿಂಗಳುಗಳವರೆಗೆ ಅವರು ಆಫ್ರಿಕಾ (Africa) ದಲ್ಲಿದ್ದರು. ವಿಶೇಷವಾಗಿ ಕಾಂಗೋ (Congo) ದಲ್ಲಿ ಹೆಚ್ಚಿನ ಸಮಯವನ್ನು ಕಳೆದರು. ಈ ಅವಧಿಯಲ್ಲಿ ಜನರನ್ನು ಕ್ರಾಂತಿಗಾಗಿ ಸಜ್ಜು ಗೊಳಿಸುವ ಪ್ರಯತ್ನ ಮಾಡಿದರು. ಆದರೆ ಅಲ್ಲಿಯ ಜನರು ಅದಕ್ಕೆ ಸರಿಯಾಗಿ ಸ್ಪಂದಿಸದೆ ಇದ್ದ ಕಾರಣ ಅದೂ ಕೂಡ ವಿಫಲವಾಯಿತು.
1966 ರಲ್ಲಿ ಅವರು ಮರಳಿ ಕ್ಯೂಬಾ ದೇಶದ ಮುಖಾಂತರ ಬೊಲಿವಿಯಾ (Bolivia) ದೇಶಕ್ಕೆ ತೆರಳಿದರು. ಅಲ್ಲೂ ಕೂಡ ಅವರು ಬೊಲಿವಿಯಾ ಅಧ್ಯಕ್ಷರಾದ ರೆನೆ ಬ್ಯಾರಿಯನ್ಟೋಸ್ ಒರ್ಚುನೋ (René Barrientos Ortuño ) ವಿರುದ್ಧ ಹೋರಾಡುವ ಯೋಜನೆ ಹೊಂದಿದ್ದರು. ಆದರೆ ಅಮೇರಿಕಾ ಸೈನ್ಯದ ಸಹಾಯದಿಂದ ಬೊಲಿವಿಯಾ ಸೇನೆ, ಚೆ ಗೆವಾರ ಮತ್ತು ಅವರ ಸೈನ್ಯವನ್ನು ಸೆರೆ ಹಿಡಿದರು. 9 ಅಕ್ಟೊಬರ್ 1967 ರಂದು ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಗುಪ್ತವಾದ ಸ್ಥಳದಲ್ಲಿ ಅವರ ದೇಹವನ್ನು ಸಮಾಧಿ ಮಾಡಲಾಯಿತು. ಅಲ್ಲಿಗೆ, ಜಗಕ್ಕೆ ಸುಧಾರಣೆಗಳ ಬೆಳಕ ನೀಡಿದ ಕ್ರಾಂತಿಯ ದೀಪವೊಂದು ಶಾಂತವಾಗಿತ್ತು. 1997 ರಲ್ಲಿ ಅವರ ಅವಶೇಷಗಳನ್ನು ಕಂಡುಹಿಡಿದು, ಅವುಗಳನ್ನು ಕ್ಯೂಬಾ ದೇಶಕ್ಕೆ ಮರಳಿಸಲಾಯಿತು.
ಚೆ ಗೆವಾರ ಅವರ ವ್ಯಕ್ತಿತ್ವವನ್ನು, ಆದರ್ಶಗಳನ್ನು ಪ್ರೀತಿಸಿದವರೂ ಇದ್ದಾರೆ, ದ್ವೇಷಿಸಿದವರೂ ಇದ್ದಾರೆ. ಅಹಿಂಸೆಯ ಮಾರ್ಗವನ್ನು ತುಳಿಯುವ ಯಾವುದೇ ಕ್ರಾಂತಿಕಾರಿಯ ಸಿದ್ಧಾಂತಗಳಿಗಾದರೂ ಈ ಮಿಶ್ರ ಸ್ಪಂದನೆ ಸಹಜವೇ ಆದರೂ ಚೆ ಗೆವಾರ ಕ್ರಾಂತಿಯ ಹೆಸರಲ್ಲಿ ಅಮಾನವೀಯತೆಯನ್ನು ಮೆರೆದವರಲ್ಲ. ಒಬ್ಬ ನಿಜವಾದ ಕ್ರಾಂತಿಕಾರಿಗೆ, ಮನುಕುಲದ ಸಮಸ್ಯೆ ತನ್ನದೇ ಸಮಸ್ಯೆ ಎನ್ನುವ ಭಾವವಿರಬೇಕು ಎಂದು ಅವರು ಭಾವಿಸಿದ್ದರು.
ಇದು ಚೆ ಎಂದೇ ಪ್ರಖ್ಯಾತರಾಗಿರುವ ಕ್ಯೂಬನ್ ಕ್ರಾಂತಿಕಾರಿ ನಾಯಕನ ಜೀವನಗಾಥೆ.
5 ಪ್ರತಿಕ್ರಿಯೆಗಳು
наркологическая скорая наркологическая скорая .
Снять алкогольную интоксикацию на дому https://www.fizioterapijakeskic.com .
бизнес-идеи для малого бизнеса бизнес-идеи для малого бизнеса .
view instagram stories without view instagram stories without .
save instagram stories [url=https://anstoriesview.com/]save instagram stories[/url] .