ಉಡುಪಿ,ಏ.18- ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ ನಾಯಕ ಅಣ್ಣಾಮಲೈ ಬಳಿ ಪೊಲೀಸರಿಗೆ ಸಿಕ್ಕಿದ್ದು,ಎರಡು ಜೊತೆ ಬಟ್ಟೆ ಎರಡು ಲೀಟರ್ ನೀರು ಮಾತ್ರ…
ಇದೇನಿದು ಅಂತಿರಾ..ರಾಜ್ಯ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ಹಲವಾರು ಕಾರಣಗಳಿಂದ ದೇಶದ ಗಮನ ಸೆಳೆದಿದೆ.ಈ ಚುನಾವಣೆ ಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಣ,ಮದ್ಯ, ಮಾದಕವಸ್ತುಗಳು ಹರಿಯುತ್ತಿವೆ ಎಂಬ ದೂರುಗಳು ಸಾಮಾನ್ಯವಾಗಿವೆ.
ಇಂತಹ ದೂರುಗಳನ್ನು ಆಧರಿಸಿ ಕಾರ್ಯಾಚರಣೆ ಮಾಡುತ್ತಿರುವ ಚುನಾವಣಾ ಆಯೋಗದ ಅಧಿಕಾರಿಗಳು ಇಲ್ಲಿಯವರೆಗೆ ಸುಮಾರು ಇನ್ನೂರು ಕೋಟಿ ರೂಪಾಯಿಗೂ ಅಧಿಕ ನಗದು,ಸಾವಿರಾರು ಲೀಟರ್ ಮದ್ಯ,ಮಾದಕವಸ್ತುಗಳನ್ನು ವಶಪಡಿಸಿಕೊಂಡು ಅಕ್ರಮ ನಡೆಯದಂತೆ ತೀವ್ರ ನಿಗಾ ವಹಿಸಿದ್ದಾರೆ.

ಈ ವಿದ್ಯಮಾನಗಳ ನಡುವೆ ಉಡುಪಿ ಜಿಲ್ಲೆಯ
ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರು ಬಿಜೆಪಿ ನಾಯಕ
ಅಣ್ಣಾಮಲೈ ಮೇಲೆ ಹೆಲಿಕಾಪ್ಟರ್ ನಲ್ಲಿ ಹಣ ತಂದಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಣ್ಣಮಲೈ ಅವರನ್ನು ಆಹ್ವಾನಿಸಲಾಗಿತ್ತು. ಹಾಗಾಗಿ ಹೆಲಿಕ್ಯಾಪ್ಟರ್ ಮೂಲಕ ಅಣ್ಣಾಮಲೈ ಅವರು ಕಾಪುಗೆ ಆಗಮಿಸಿದ್ದರು.
ಇದೇ ವಿಚಾರವಾಗಿ ಕಾಪು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಅಣ್ಣಾಮಲೈಯವರು ಬರುವ ಹೆಲಿಕಾಪ್ಟರ್ ನಲ್ಲಿ ಹಣ ತೆಗೆದುಕೊಂಡು ಬರಲಾಗಿದೆ, ಚುನಾವಣಾ ಆಯೋಗ ಅದನ್ನ ಪರಿಶೀಲನೆ ಮಾಡಬೇಕು ಅಂತ ಹೇಳಿಕೆ ನೀಡಿದ್ದರು. ಹೀಗಾಗಿ, ಜಿಲ್ಲೆಯಾ ಚುನಾವಣಾ ಅಧಿಕಾರಿಗಳು ಅಣ್ಣಾಮಲೈ ಯವರ ಬ್ಯಾಗ್ ಇನ್ನಿತರ ವಸ್ತುಗಳನ್ನು ಪರಿಶೀಲನೆ ಮಾಡಿದ್ದಾರೆ.
ಈ ತಪಾಸಣೆ ವೇಳೆ ಯಾವುದೇ ಹಣ ಅಥವಾ ದಾಖಲೆಗಳು ಸಿಕ್ಕಿಲ್ಲ ಎನ್ನುವ ಪ್ರಕಟಣೆಯನ್ನು ಚುನಾವಣಾ ಅಧಿಕಾರಿಗಳು ಹೊರಡಿಸಿದ್ದಾರೆ.
ತಪಾಸಣೆ ನಡೆಸಿ ವಾಹನದಲ್ಲಿ ಒಂದು ಬ್ಯಾಗ್ ಇದ್ದು ಅದರಲ್ಲಿ 2 ಜೊತೆ ಬಟ್ಟೆಗಳು ಹಾಗೂ ಕುಡಿಯುವ ನೀರಿನ ಬಾಟಲ್ ಗಳು ಮಾತ್ರ ಇದೆ ಅಂತ ವರದಿಯನ್ನು ಸಲ್ಲಿಸಿದ್ದಾರೆ.

