ಜಯಕರ್ನಾಟಕ ಸಂಘಟನೆಯ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ಹಾಕಿದ್ದಾರೆ ಎಂದು ಆರೋಪಿಸಿ ಜಯಕರ್ನಾಟಕ ಸಂಘಟನೆ ಸದಸ್ಯರು ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೂರು ನೀಡಿದ್ದಾರೆ. ದಿವಂಗತ ಡಾನ್ ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈನಿಂದ ಹತ್ಯೆಗೆ ಸ್ಕೆಚ್ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ಹತ್ಯೆಗೆ ಸ್ಕೆಚ್ ಹಾಕಿರುವ ಆರೋಪವನ್ನು ತಳ್ಳಿ ಹಾಕಿರುವ ಮನ್ಮಿತ್ ರೈ, ಬ್ಯುಸಿನೆಸ್ ವಿಚಾರವಾಗಿ ತಾನು ವಿದೇಶದಲ್ಲಿರುವುದಾಗಿ ಹೇಳುತ್ತಿದ್ದಾರೆ. ಗುಣರಂಜನ್ ಶೆಟ್ಟಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ. ಗುಣರಂಜನ್ ಶೆಟ್ಟಿ ಮತ್ತು ಮನ್ಮಿತ್ ಇಬ್ಬರೂ ಮುತ್ತಪ್ಪ ರೈ ಜೊತೆ ಇದ್ದವರು. ನಂತರ ಮುತ್ತಪ್ಪ ರೈ ಜೊತೆಯಿಂದ ಮನ್ಮಿತ್ ಹೊರಬಂದಿದ್ದ. ಆರೋಪದ ಬಗ್ಗೆ ಮಾತನಾಡಿರುವ ಮನ್ಮಿತ್ ರೈ, ಇದು ಎಷ್ಟು ಸತ್ಯ ಎಂಬುವುದನ್ನ ಪೊಲೀಸರು ತನಿಖೆ ಮಾಡುತ್ತಾರೆ. ಆದ್ರೆ ಈ ವಿಚಾರದಲ್ಲಿ ನನ್ನ ಹೆಸರು ಏಕೆ ಬರುತ್ತಿದೆಯೋ ಗೊತ್ತಿಲ್ಲ. ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇನೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಮೇಲೆ ಇದುವೆರಗೂ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ಯಾವ ಸ್ಟೇಷನ್ನಲ್ಲೂ ಎಫ್ಐಆರ್ ದಾಖಲಾಗಿಲ್ಲ. ಯಾವುದೇ ಅಪರಾಧ ಪ್ರಕರಣಗಳಿಲ್ಲದಿದ್ದರೂ ಯಾಕೆ ನನ್ನ ವಿರುದ್ದ ಆರೋಪ ಬರುತ್ತಿದೆ ಗೊತ್ತಿಲ್ಲ ಎಂದಿದ್ದಾರೆ.