ಬೆಂಗಳೂರು : ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ, ಹೊಸದಾಗಿ ಎಲ್ಲಾ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೇಮಕ ಮಾಡಲು ತೀರ್ಮಾನಿಸಿದ್ದು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಬಾರಿ ಪೈಪೋಟಿ ಉಂಟಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಾಟಕ ಅಕಾಡೆಮಿ ಸೇರಿದಂತೆ ಎಲ್ಲಾ ಅಕಾಡೆಮಿ ಮತ್ತು ಪ್ರಾಧಿಕಾರಗಳ ನೇಮಕಾತಿ ಆದೇಶಗಳನ್ನು ರದ್ದುಪಡಿಸಲಾಗಿದೆ.
ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಅಕಾಡೆಮಿ ಗಳಿಗೆ ಸಂಘ ಪರಿವಾರ ಮತ್ತು ಬಲಪಂಥೀಯ ವಿಚಾರಧಾರೆಯ ವ್ಯಕ್ತಿಗಳನ್ನು ನೇಮಕ ಮಾಡಲಾಗಿತ್ತು ಈ ಮೂಲಕ ಸಾಂಸ್ಕೃತಿಕ ಮತ್ತು ಸಾಹಿತ್ಯದ ಸಂಘಟನೆಗಳನ್ನು ಕೇಸರಿಕರಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಇಂತಹ ಆರೋಪಗಳ ಬಗ್ಗೆ ಹಿಂದಿನ ಬಿಜೆಪಿ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಈ ಬಗ್ಗೆ ಕೇಳಿ ಬಂದ ಟೀಕೆಗಳಿಗೆ ಉತ್ತರ ನೀಡುವ ಗೋಜಿಗೂ ಹೋಗಿರಲಿಲ್ಲ. ಆದರೆ ಇವುಗಳಿಗೆ ನೇಮಕಗೊಂಡವರು ಮಾತ್ರ ತಮ್ಮ ನಿಲುವುಗಳನ್ನು ಬಲವಾಗಿ ಸಮರ್ಥಿಸಿದ್ದರು.
ಇದೀಗ ನೂತನ ಸರ್ಕಾರ ಈ ಎಲ್ಲಾ ನೇಮಕಾತಿಗಳನ್ನು ರದ್ದುಪಡಿಸಿದೆ. ಈ ಬಗ್ಗೆ ಮೊದಲೇ ಸುಳಿವು ದೊರೆತಿದ್ಧ ಹಿನ್ನೆಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಹಲವಾರು ಗಣ್ಯರು ಇವುಗಳ ನೇಮಕಕ್ಕಾಗಿ ತಮ್ಮದೇ ವಲಯದಲ್ಲಿ ಲಾಬಿ ಆರಂಭಿಸಿದ್ದಾರೆ.
ವಿಶೇಷವೆಂದರೆ ಕಾಂಗ್ರೆಸ್ ವಿಚಾರಧಾರೆಯೊಂದಿಗೆ ನೇರವಾಗಿ ಗುರುತಿಸಿಕೊಂಡಿದ್ದ ಹಲವು ಸಾಹಿತಿಗಳು ಈ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರೆ, ಅಂದು ನಡೆದ ನೇಮಕಾತಿ ಮತ್ತು ಕೇಸರಿ ಕರಣ ಆರೋಪದ ಬಗ್ಗೆ ಯಾವುದೇ ಚಕಾರವೆತ್ತದೆ ಮೌನವಾಗಿದ್ದ ದೊಡ್ಡ ಸಂಖ್ಯೆಯ ಗಣ್ಯರು ಇದೀಗ ಈ ಸಂಸ್ಥೆಗಳಿಗೆ ನೇಮಕಗೊಳ್ಳಲು ಪೈಪೋಟಿ ನಡೆಸಿದ್ದಾರೆ.
ಈಗಾಗಲೇ ಹಲವಾರು ಮಂದಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಮತ್ತು ಸಚಿವರನ್ನು ಭೇಟಿ ಮಾಡಿ ತಮ್ಮ ವ್ಯಕ್ತಿಗತ ವಿವರಗಳ ದಾಖಲೆಗಳನ್ನು ನೀಡಿ ತಮಗೆ ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಇದಷ್ಟೇ ಅಲ್ಲದೆ ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ , ದೇವನೂರು ಮಹಾದೇವ,ಕೆ.ಎಂ. ಮರುಳಸಿದ್ದಪ್ಪ ಸೇರಿದಂತೆ ಹಲವು ಖ್ಯಾತ ನಾಮರನ್ನು ಸಂಪರ್ಕಿಸಿ ತಮಗೆ ಅಕಾಡೆಮಿ ಮತ್ತು ಪ್ರಾಧಿಕಾರಗಳಲ್ಲಿ ಉನ್ನತ ಹುದ್ದೆ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರಿಗೆ ಹಿರಿಯ ಸಾಹಿತಿಗಳಾದ ಬರಗೂರು ದೇವನೂರು ಮತ್ತು ಮರಳಸಿದ್ದಪ್ಪ ಅವರ ಬಗ್ಗೆ ವಿಶೇಷವಾದ ಗೌರವ ಮತ್ತು ಪ್ರೀತಿ ಇದೆ ಇವರು ಯಾರ ಹೆಸರನ್ನಾದರೂ ಶಿಫಾರಸು ಮಾಡಿದರೆ ಅದನ್ನು ಮರು ಮಾತಿಲ್ಲದೆ ಒಪ್ಪುತ್ತಾರೆ ಎಂಬ ಮಾತಿದೆ.
ಹೀಗಾಗಿ ಬಿಕ್ಕಟ್ಟಿನ ಸಮಯದಲ್ಲಿ ಮೌನಕ್ಕೆ ಶರಣಾಗಿದ್ದ ಅನೇಕ ಮಂದಿ ಖ್ಯಾತ ಸಾಹಿತಿಗಳು ಲೇಖಕರು ಚಿತ್ರ ಕಲಾವಿದರು ಸಿನಿಮಾ ನಟರು ಸೇರಿದಂತೆ ಸಾಂಸ್ಕೃತಿಕ ಲೋಕದ ಗಣ್ಯರು ಇದೀಗ ಸರ್ಕಾರದಲ್ಲಿ ಯಾರ ಮಾತು ನಡೆಯುತ್ತದೆ ಎಂಬುದನ್ನು ಪರಿಶೀಲಿಸಿ, ಅವರಿಂದ ಶಿಫಾರಸು ಮಾಡಿಸಿಕೊಳ್ಳಲು ದುಂಬಾಲು ಬಿದ್ದಿದ್ದಾರೆ.
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅವರು ಈ ನೇಮಕಾತಿಯ ಸಮಯದಲ್ಲಿ ಡಾ. ಬರಗೂರು ರಾಮಚಂದ್ರಪ್ಪ ನೀಡಿರುವ ಸಾಂಸ್ಕೃತಿಕ ನೀತಿಯ ಶಿಫಾರಸುಗಳನ್ನು ಆಧರಿಸಿ ಅದಕ್ಕೆ ಅನುಗುಣವಾಗಿ ಮಾತ್ರ ನೇಮಕ ಮಾಡಬೇಕು ಶಿಫಾರಸು ಪತ್ರ ಲಾಭಿ ಮಾಡುವ ಸಾಂಸ್ಕೃತಿಕ ಲೋಕದ ಖ್ಯಾತ ನಾಮರಿಗೆ ಮನ್ನಣೆ ನೀಡಬಾರದು ಎಂಬ ತೀರ್ಮಾನ ಕೈಗೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
Previous Articleಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ
Next Article ಹೊಸ ಸರ್ಕಾರ ಕೊಡಲಿದೆಯ BJPಗೆ ಮರ್ಮಾಘಾತ?