ಬೆಂಗಳೂರು,ಫೆ.16-
ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ (Dr. Ashwath Narayan) ಸಾರ್ವಜನಿಕ ಸಭೆಯೊಂದರಲ್ಲಿ ಟಿಪ್ಪೂ ಸುಲ್ತಾನ್ (Tipu Sultan) ನನ್ನು ಮುಗಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರನ್ನೂ ಮುಗಿಸಿಬಿಡಿ ಎಂಬುದಾಗಿ ನೀಡಿರುವ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಇಂತಹ ಹೇಳಿಕೆ ನೀಡಿರುವ ಸಚಿವರ ವಿರುದ್ಧ ನಾನು ದೂರು ಕೊಡಲ್ಲ. ಪೊಲೀಸರೇ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ‘ನನ್ನನ್ನು ಮುಗಿಸುವಂತೆ ಕರೆನೀಡುವ ಮೂಲಕ ಜನರನ್ನು ಯಾಕೆ ಪ್ರಚೋದಿಸುತ್ತೀರಿ ಸಚಿವರೇ? ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ’ ಎಂದು ಆಹ್ವಾನ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು ‘ನನ್ನ ಹತ್ಯೆಗೆ ಡಾ. ಅಶ್ವತ್ಥನಾರಾಯಣ ಅವರು ಕೊಟ್ಟ ಕರೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ? ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ’ ಎಂದು ಕಿಡಿಕಾರಿದ್ದಾರೆ.
ಮಾಜಿ ಮಂತ್ರಿ ಡಾ.ಮಹಾದೇವಪ್ಪ (Dr H C Mahadevappa) ಕೂಡ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದು ‘ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುವ ಈತ ತನ್ನ ಹೆಸರನ್ನು ‘ಅಸ್ವಸ್ಥ ನಾರಾಯಣ’ ಎಂದು ಬದಲಿಸಿಕೊಳ್ಳಲಿ’ ಎಂದು ಟ್ವೀಟ್ ಮಾಡಿದ್ದಾರೆ.
ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ (Prakash Rathod) ಪ್ರತಿಕ್ರಿಯಿಸಿದ್ದು, ‘ಕೊಲೆಗಡುಕ ಮನಸ್ಥಿತಿಯ ಡಾ. ಅಶ್ವತ್ಥನಾರಾಯಣ ಅವರೇ, ಸಿದ್ದರಾಮಯ್ಯ ಅವರನ್ನು ಕೊಲ್ಲಲು ಕಂಡವರ ತಾಯಿಯ ಮಕ್ಕಳನ್ನು ಪ್ರಚೋದಿಸಿದ್ದೀರಿ. ನಿಮಗೇನು ನರರೋಗ ಬಂದಿದೆಯಾ? ನಿಮ್ಮ ಸರಕಾರಕ್ಕೆ ಬಂದಿರುವ ನರರೋಗ ನಿಮಗೆ, ನಿಮ್ಮ ಮಕ್ಕಳಿಗೂ ಬಂದಿದೆಯಾ? ನಿಮ್ಮ ಮೆದುಳು-ಹೃದಯ ಸತ್ತೋಗಿ ನಾಲಗೆ ಮಾತ್ರ ಜೀವಂತ ಇದೆಯಾ? ಆರಗ ಜ್ಞಾನೇಂದ್ರ (Araga Jnanendra) ಅವರೇ ಬದುಕಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.
‘ಸಚಿವ ಅಶ್ವತ್ಥನಾರಾಯಣ ಅವರೇ, ನಿಮ್ಮೊಳಗೂ ಕೊಲೆಗಡುಕ ಸಿದ್ಧಾಂತದ ಸನಾತನ DNA ಇದೆ ಎಂದು ಸಾಬೀತುಪಡಿಸಿದ್ದೀರಿ. ನಿಮ್ಮ ತೊಡೆಯಲ್ಲಿ ತಾಕತ್ತಿದ್ದರೆ ನೀವೇ ಆ ಕೆಲಸಕ್ಕೆ ಮುಂದಾಗಿ ನೋಡೋಣ. ಕಂಡವರ ಮಕ್ಕಳನ್ನು ಕೊಲೆಗೆ ಪ್ರಚೋದಿಸಿದ್ದೀರಿ. ನಿಮ್ಮ ಮಕ್ಕಳಿಗೇ ಈ ಕೊಲೆಗಡುಕ ಸಿದ್ಧಾಂತ ಹೇಳಿಕೊಟ್ಟು ಪ್ರಚೋದಿಸಬಹುದಲ್ಲವೇ?’ ಎಂದು ಪ್ರಕಾಶ್ ರಾಠೋಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಚಿವ ಅಶ್ವತ್ಥ್ ನಾರಾಯಣ್ ಹಾಗೂ BJP ಯವರು ಮೀರ್ ಸಾದಿಕ್ (Mir Sadiq) ವಂಶಸ್ಥರು’ ಎಂದು ವಾಗ್ದಾಳಿ ನಡೆಸಿರುವ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು. ಟಿ. ಖಾದರ್ (U. T. Khader) ‘ನೇರವಾಗಿ ಹೋರಾಟ ಮಾಡುವ, ಚರ್ಚೆ ಮಾಡುವ ಧೈರ್ಯ ಅವರಿಗೆ ಇಲ್ಲ’ ಎಂದರು. ‘ಮಹಾತ್ಮ ಗಾಂಧೀಜಿ ಅವರನ್ನು ಕೊಂದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಗೋಡ್ಸೆ ವಂಶಸ್ಥರು’ ಎಂದು ಕಿಡಿಕಾರಿದರು.
‘ಇವರು ಹೊಡೆದುಹಾಕಲು ನೋಡಿದರೆ, Congress ನಾಯಕರನ್ನು ಜನರೇ ಮೂರನೇ ಮಹಡಿಗೆ ತಂದು ಕೂರಿಸುತ್ತಾರೆ. ರಾಜ್ಯದ ಜನರೇ ಇವರಿಗೆ ಉತ್ತರವನ್ನೂ ಕೊಡುತ್ತಾರೆ’ ಎಂದು ಹೇಳಿದರು.
ಸಚಿವರ ವಿಷಾದ:
ತಮ್ಮ ಹೇಳಿಕೆಯ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸಚಿವ ಅಶ್ವಥ್ ನಾರಾಯಣ್, ತಾವು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇನೆ ವಿನಃ ವೈಯಕ್ತಿಕವಾಗಿ ಅಲ್ಲ. ಹೀಗಾಗಿ ಅವರಿಗೆ ನನ್ನ ಹೇಳಿಕೆಯಿಂದ ವೈಯಕ್ತಿಕವಾಗಿ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.
‘ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ. ಯುದ್ಧದ ಕಾಲದಲ್ಲಿ ಅಲ್ಲ. ಪ್ರಜಾಪ್ರಭುತ್ವದಲ್ಲಿ ಗೆಲ್ಲಬೇಕಿದೆ. ಆ ವಿಚಾರವಾಗಿ ಹೇಳಿದ್ದೇನೆ ಹೊರತು ಬೇರೆ ರೀತಿ ಅಲ್ಲ’ ಎಂದು ಸ್ಪಷ್ಟಪಡಿಸಿದರು.
‘ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇನೆ ವಿನಃ ನನ್ನ ಮಾತಿನ ಉದ್ದೇಶ ವೈಯಕ್ತಿಕವಾಗಿ ಅಲ್ಲ. ಮಂಡ್ಯದಲ್ಲಿ ಕಸಬಾ ಮಹಾಶಕ್ತಿ ಕೇಂದ್ರ (Kasaba Maha Shakti Kendra) ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಟಿಪ್ಪು ಹೆಸರು ಉಲ್ಲೇಖ ಮಾಡಿದೆ. ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ಮಾಡುತ್ತಿದೆ. ಅದನ್ನು ಖಂಡಿಸುವಂತೆ ಆಗಬೇಕು ಎಂದು ಜನರಿಗೆ ನಾನು ಸ್ಪಷ್ಟವಾಗಿ ಹೇಳಿದೆ. ಇವರ ಹಾಗೆ ಮುಖ್ಯಮಂತ್ರಿಗೆ ನಾಯಿ, ಪ್ರಧಾನಿಗೆ ನರ ಹಂತಕ, ಜಾತಿ, ಧರ್ಮ ಆಧಾರಿತವಾಗಿ ಸಮಾಜ ಒಡೆಯುವ ಕೆಲಸ ಮಾಡಿಲ್ಲ. ಇವರ ಹಾಗೆ ವೈಯಕ್ತಿಕವಾಗಿ ವಿರೋಧ ಮಾಡಿಲ್ಲ. ಮತ ಗೆಲ್ಲಬೇಕೇ ವಿನಃ ಮತ್ತೆ ಬೇರೇನೂ ಅಲ್ಲ’ ಎಂದು ಹೇಳಿದ್ದಾರೆ.