ಬೆಂಗಳೂರು,
ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಗೋವುಗಳ ಬಗ್ಗೆ ಅಪಾರ ಕಾಳಜಿಯನ್ನು ವ್ಯಕ್ತಪಡಿಸಿ ದತ್ತು ಯೋಜನೆ ಜಾರಿಗೆ ತಂದಿತ್ತು. ಈ ಯೋಜನೆ ಅಡಿಯಲ್ಲಿ ಎಷ್ಟು ಗೋವುಗಳನ್ನು ಬಿಜೆಪಿ ಶಾಸಕರು ದತ್ತು ಪಡೆದುಕೊಂಡಿದ್ದಾರೆ? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಪ್ರಶ್ನಿಸಿದರು.
ಪ್ರಸಕ್ತ ಸಾಲಿನ ಬಜೆಟ್ ಕುರಿತು ಚರ್ಚೆ ನಡೆಸುತ್ತಿದ್ದ ಬಿಜೆಪಿಯ ಶರಣು ಸಲಗಾರ್ ಅವರು ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಗೋ ಸಂಪತ್ತು ರಕ್ಷಿಸುವ ಕುರಿತು ಪ್ರಸ್ತಾಪಿಸಿದರು.
ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಬಿಜೆಪಿ ಶಾಸಕರನ್ನು ಪ್ರಶ್ನಿಸಿದರು.ಸಚಿವರ ಪ್ರಶ್ನೆಗೆ ಬಿಜೆಪಿ ಶಾಸಕರು ಸೂಕ್ತ ರೀತಿಯಲ್ಲಿ ಉತ್ತರ ನೀಡಲು ಸಾಧವಾಗದೆ ಇಕ್ಕಟ್ಟಿಗೆ ಸಿಲುಕಿದ ಪರಿಸ್ಥಿತಿ ಸೃಷ್ಟಿಯಾಯಿತು
ಶರಣು ಸಲಗಾರ ಅವರು ಗೋ ರಕ್ಷಣೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಗೋಮಾಂಸ ಮಾರಾಟ ಕಂಪನಿ ಯಾರದ್ದು? ಗೊತ್ತಾ ಎಂದು ಕಂಪನಿಯೊಂದರ ಹೆಸರು ಉಲ್ಲೇಖ ಮಾಡಿದರು.
ಇದಕ್ಕೆ ತಕರಾರು ತೆಗೆದ ಹಿರಿಯ ನಾಯಕ ಡಾ.ಅಶ್ವತ್ ನಾರಾಯಣ ಆ ಸಂಸ್ಥೆಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ. ಪ್ರಿಯಾಂಕ್ ವಿಷಯಾಂತರ ಮಾಡ್ತಿದ್ದಾರೆ” ಎಂದು ಆಕ್ಷೇಪಿಸಿದರು. ಇದಕ್ಕೆ ‘ನೀವು ಏಕೆ ಎದ್ದೇಳುತ್ತೀರಿ’ ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ಇದಕ್ಕೆ ಅಶ್ವತ್ಥ ನಾರಾಯಣ ತಿರುಗೇಟು ನೀಡಿ, “ಸರ್ಕಾರ ಸೂಕ್ಷ್ಮತೆ ಕಳೆದುಕೊಂಡಿದೆ. ಹಾಗಿದ್ದರೆ ನೀವು ಕ್ರಮ ಕೈಗೊಳ್ಳಿ. ಸರ್ಕಾರ ನಿಮ್ಮದು ಕಂಪನಿ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ಅಶ್ವತ್ಥ ನಾರಾಯಣ ಸವಾಲು ಹಾಕಿದರು.
ಮಾತಿನ ಸಂದರ್ಭದಲ್ಲಿ ನಿಮಗೆ ಕೀಳರಿಮೆ ಇದ್ಯಾ ಎಂದು ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡರು. ಇದಕ್ಕೆ ನನಗಿಲ್ಲ ನಿಮಗಿರಬಹುದು ಎಂದು ಅಶ್ವತ್ಥ್ ತಿರುಗೇಟು ನೀಡಿದರು. ಈ ವೇಳೆ ಇಬ್ಬರ ನಡುವೆ ಮಾತಿನ ವಾಕ್ಸಮರ ನಡೆಯಿತು.
ಈ ವೇಳೆ ಸುರೇಶ್ ಕುಮಾರ್ ಮಧ್ಯಪ್ರವೇಶ ಮಾಡಿ, “ಅಶ್ವತ್ಥ ನಾರಾಯಣ ಅವರು ಕಳಕಳಿಯಿಂದ ಭಾವನೆ ವ್ಯಕ್ತಪಡಿಸಿದ್ದಾರೆ. ನೀವು ಕ್ವಿಜ್ ತರ ಕೇಳುವ ಅಗತ್ಯ ಏನಿದೆ” ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರಿಯಾಂಕ್ ಸಮರ್ಥನೆ ನೀಡಿ, “ಪ್ರಶ್ನೆ ಕೇಳುವ ಅಗತ್ಯ ಇದೆ, ಇನ್ ಸೈಡ್ ಆಗಬಾರದು. ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡ್ತಿದ್ದಾರೆ. ಯಾವ ಜಿಲ್ಲೆಯಲ್ಲಿ ಏನಾಗಿದೆ ಎಂಬ ಮಾಹಿತಿ ಕೊಡಲಿ. ಗೋ ಬಗ್ಗೆ ಕಳಕಳಿಯಿಂದ ಮಾತನಾಡ್ತಾರೆ. ಆ ಕಳಕಳಿ ದೇಶಾದ್ಯಂತ ಇರಲಿ. ನಾನು ಕೇಳಿರುವ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದರೆ ಪರವಾಗಿಲ್ಲ” ಎಂದು ಪ್ರಿಯಾಂಕ್ ತಿರುಗೇಟು ನೀಡಿದರು.
ಈ ವೇಳೆ ಸಚಿವ ಸುಧಾಕರ್ ಮಧ್ಯಪ್ರವೇಶ ಮಾಡಿ, “ಹೈನೋದ್ಯಮದಲ್ಲಿ ಇರುವವರಿಗೆ ಕಷ್ಟ ಏನು ಎಂದು ಗೊತ್ತು. ಗೋಸಾಗಾಟ ಮಾಡ್ತಾರೆಂದು ವಿಡಿಯೋ ಮಾಡಿ ಗಲಾಟೆ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಪ್ರತಿವಾರ ದೊಡ್ಡ ಸಂತೆ ಇದೆ. ಹಾಲು ಕೊಡುವ ಹಸುಗಳನ್ನು ಅಲ್ಲಿ ಮಾರಾಟ ಮಾಡ್ತಾರೆ.ಗಂಡು ಕರುವನ್ನು ಎರಡು ದಿನ ಇಟ್ಟುಕೊಳ್ಳಲ್ಲ. 99% ರೈತರು ಇಂತಹ ಕರುಗಳನ್ನು ಇಟ್ಟುಕೊಳ್ಳಲ್ಲ. ಜಾಗ ಕೊಡ್ತೀವಿ, ಗೋಶಾಲೆ ಮಾಡಿ ನೋಡಿಕೊಳ್ಳಿ ಎಂದರೆ ಯಾರೂ ತಯಾರಿಲ್ಲ. ಇಲ್ಲಿ ಯಾರೂ ವ್ಯಾಪಾರ ಮಾಡ್ತಿಲ್ಲ ಎಂದು ರೈತರು ಬಂದು ಪ್ರತಿಭಟನೆ ಮಾಡಿದ್ದರು” ಎಂದು ವಿವರಿಸಿದರು.
ರೈತರಲ್ಲಿ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕು. ಸಾಗಾಟ ಮಾಡುವವರನ್ನು ತಡೆಯೋದು ಸರಿಯಲ್ಲ. ಸಮಸ್ಯೆಗೆ ಪರಿಹಾರ ಹುಡುಕಬೇಕು. ಕೇವಲ ಗೋ ರಕ್ಷಣೆ ಎಂದು ಹೇಳಿದರೆ ಸಾಲದು. ನೈತಿಕ ಪೊಲೀಸ್ ಗಿರಿ ಒಳ್ಳೆಯದಲ್ಲ” ಎಂದು ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಪ್ರಿಯಾಂಕ್ ಖರ್ಗೆ, ಹಿಂದಿನ ಸರ್ಕಾರದಲ್ಲಿ ಗೋ ದತ್ತು ಯೋಜನೆ ಎಂದಿತ್ತು. 11 ಗೋವುಗಳನ್ನು ಪ್ರಭು ಚೌಹಾಣ್ ದತ್ತು ಪಡೆದುಕೊಂಡಿದ್ದರು. ಬೊಮ್ಮಾಯಿ ಅವರು ಐದಾರು ಗೋವು ದತ್ತು ತೆಗೆದುಕೊಂಡಿದ್ದರು. ಅದನ್ನು ಹೊರತು ಪಡಿಸಿ ಯಾವ ಬಿಜೆಪಿ ಶಾಸಕರು ಗೋ ದತ್ತು ಪಡೆದುಕೊಂಡಿಲ್ಲ. ಎಷ್ಟು ಬಿಜೆಪಿ ಶಾಸಕರು ಜನ ದತ್ತು ಪಡೆದುಕೊಂಡರು ಎಂಬ ಅಂಕಿ ಅಂಶ ನೀಡಿ ಎಂದು ಸವಾಲು ಹಾಕಿದರು. ಈ ವೇಳೆ ಬಿಜೆಪಿ ಸದಸ್ಯರು ಮತ್ತು ಪ್ರಿಯಾಂಕ್ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರಿಯಾಂಕ್ ಖರ್ಗೆ ಪ್ರಶ್ನೆಗೆ ತಬ್ಬಿಬ್ಬಾದ ಬಿಜೆಪಿ ಶಾಸಕರು
Previous Article‘ಯುಎಇ’ಯಲ್ಲಿ 19 ಭಾರತೀಯರು ಅರೆಸ್ಟ್! ಯಾಕೆ ಗೊತ್ತಾ?
Next Article ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ನೋಟಿಸ್

