ಚಿಕ್ಕಮಗಳೂರು ಅ.28- ಸೂಫಿ ಸಂತ, ಗುರು ದತ್ತ ನ ನೆಲವೀಡು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಹಜರತ್ ಸೈಯದ್ ಗೌಸ್ ಮೊಹಿದ್ದೀನ್ ಮನೆಯಲ್ಲಿ ಹುಲಿ, ಚಿರತೆ, ಜಿಂಕೆ ಚರ್ಮ ಮೊದಲಾದ ವನ್ಯಜೀವಿ ಉತ್ಪನ್ನಗಳು ಪತ್ತೆಯಾಗಿವೆ.
ಹಿನ್ನೆಲೆಯಲ್ಲಿ ಶಾಖಾದ್ರಿ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ 1972 ರ ಅಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಶಾಖಾದ್ರಿ ಹಜರತ್ ಸೈಯದ್ ಗೌಸ್ ಮೊಹಿದ್ದೀನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಾಖಾದ್ರಿ ಮನೆಯಲ್ಲಿ ಹುಲಿ ಚರ್ಮ ಇದೆ ಎಂದು ಹಲವರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಚಿಕ್ಕ ಮಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಅವರ ನಿವಾಸದ ಮೇಲೆ ದಾಳಿ ಮಾಡಿದ್ದರು.ಈ ವೇಳೆ ಚಿರತೆ, ಜಿಂಕೆ ಮತ್ತು ಚರ್ಮ ಪತ್ತೆಯಾಗಿತ್ತು.
ಅವುಗಳನ್ನು ಜಪ್ತಿ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಚರ್ಮದ ಕುರಿತು ತನಿಖೆ ನಡೆಸುತ್ತಿದ್ದಾರೆ. ಇನ್ನು ಶಾಖಾದ್ರಿ ನಿನ್ನೆಯಿಂದ ಅಧಿಕಾರಿಗಳ ತನಿಖೆಗೆ ಸಹಕಾರ ನೀಡದೆ ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಉಪ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.