ಬೆಂಗಳೂರು, ಸೆ.4 – ರಾಜಕೀಯ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ ತತ್ವಗಳ ಅನುಷ್ಠಾನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಅತಿ ಹಿಂದುಳಿದ ಸಮುದಾಯಗಳು ತೀರ್ಮಾನಿಸಿವೆ.
ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಹಾಗೂ ಸಂಘಟನೆಗೆ ತೀರ್ಮಾನಿಸಿರುವ ಸಮುದಾಯದ ಮುಖಂಡರು ಸಂಘಟನಾತ್ಮಕ ಹೋರಾಟಗಳ ರೂಪಿಸಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪೂರ್ವ ಭಾವಿ ಸಭೆ ಕರೆದಿದ್ದಾರೆ.
ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಇದೇ ಸೆಪ್ಟೆಂಬರ್ 9 ರಂದು ಈಡಿಗ, ಬಿಲ್ಲವ, ನಾಮಧಾರಿ ಸೇರಿ ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವ ಭಾವಿ ಸಭೆ ನಡೆಯಲಿದೆ.
ಬೆಳಿಗ್ಗೆ 10ಕ್ಕೆ ಆರಂಭಗೊಳ್ಳುವ ಸಭೆಯನ್ನು ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಲಿದ್ದು, ರಾಷ್ಟ್ರೀಯ ಈಡಿಗ ಮಹಾಮಂಡಳದ ಅಧ್ಯಕ್ಷರಾದ ಶ್ರೀ ಪ್ರಣವಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದು ಪೂರ್ವಭಾವಿ ಸಭೆಯ ಸ್ವಾಗತ ಸಮಿತಿಯ ಅಧ್ಯಕ್ಷ,ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ್ ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸಲು ಶ್ರಮಿಸಿರುವ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾಜಿ ಸಂಸದ ಎಚ್.ಜಿ. ರಾಮುಲು ಅವರಿಗೆ ಸಭೆಯಲ್ಲಿ ಗೌರವ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ವಿಧಾನ ಪರಿಷತ್ ಹಾಲಿ ಸದಸ್ಯ ಬಿ.ಕೆ. ಹರಿಪ್ರಸಾದ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ,ಆಂಧ್ರದ ವಸತಿ ಸಚಿವ ಜೋಗಿ ರಮೇಶ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ,ಹಲವು ಪೀಠಗಳ ಮಠಾಧೀಶರು ರಾಜಕೀಯ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು,ಜನಪ್ರತಿನಿಧಿಗಳು
ಹಿಂದುಳಿದ ವರ್ಗಗಳು,ಅಲೆಮಾರಿ,ಅರೆ ಅಲೆಮಾರಿಗಳು ವಿವಿಧ ಸಂಘಟನೆಗಳ ನಾಯಕರು,ಪದಾಧಿಕಾರಿಗಳೂ ಸಭೆಯಲ್ಲಿ ಪಾಳ್ಗೊಳ್ಳಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಅತಿ ಹಿಂದುಳಿದ ವರ್ಗಗಳ ಜನರಿಗೆ ಸಾಮಾಜಿಕ ನ್ಯಾಯವನ್ನು ದೊರಕಿಸುವ ನಿಟ್ಟಿನಲ್ಲಿ ಸಭೆಯು ಒಂದು ಐತಿಹಾಸಿಕ ಹೆಜ್ಜೆಯಾಗಲಿದೆ.ಸಭೆಯ ನಿರ್ಣಯದಂತೆ ಮುಂದಿನ ಹೋರಾಟ ಕಾರ್ಯಕ್ರಮಗಳು ರೂಪುಗೊಳ್ಳಲಿವೆ ಎಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದೂ ಅವಕಾಶ ವಂಚಿತವಾಗಿರುವ ಅತಿ ಹಿಂದುಳಿದ ಸಮುದಾಯಗಳ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟಿತವಾದ ಹೋರಾಟವೊಂದನ್ನು ರೂಪಿಸುವುದು ಅನಿವಾರ್ಯವಾಗಿರುವ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಸಂಚಾಲಕ ಲೋಹಿತ್ ನಾಯಕ, ದಲಿತ ಮುಖಂಡ ಸಿದ್ಧಾರ್ಥ ಆನಂದ್ ಉಪಸ್ಥಿತರಿದ್ದರು.