ಬೆಂಗಳೂರು,ಜ.31-
ಸುಳ್ಳು ಲೆಕ್ಕ, ತೆರಿಗೆ ವಂಚನೆ ಮೊದಲಾದ ಆರ್ಥಿಕ ಅಪರಾಧಗಳ ದೂರುಗಳ ಹಿನ್ನೆಲೆಯಲ್ಲಿ ಖಚಿತ ಮಾಹಿತಿಯನ್ನು ಕಲೆ ಹಾಕಿದ ಆದಾಯ ತೆರಿಗೆ (IT) ಅಧಿಕಾರಿಗಳು ಬೆಂಗಳೂರಿನಲ್ಲಿ ಚಿನ್ನಾಭರಣ ವ್ಯಾಪಾರಿಗಳಿಗೆ ಶಾಕ್ ನೀಡಿದ್ದಾರೆ. ತೆರಿಗೆ ವಂಚನೆ ಮಾಡಿ ವ್ಯಾಪಾರ ಮಾಡುತ್ತಿದ್ದ ಆರೋಪದಲ್ಲಿ ನಗರದ ಸುಮಾರು 25ಕ್ಕೂ ಹೆಚ್ಚು ಚಿನ್ನಾಭರಣಗಳ ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.
ಚಿನ್ನದಂಗಡಿಗಳು ಹೆಚ್ಚಾಗಿರುವ ಮಲ್ಲೇಶ್ವರಂ, ಜಯನಗರ, ಯಶವಂತಪುರ, ಬಸವನಗುಡಿ, ಚಿಕ್ಕಪೇಟೆ ನಗರದಲ್ಲಿನ ವ್ಯಾಪಾರಿಗಳ ಅಂಗಡಿಗಳ ಮೇಲೆ ದಾಳಿ ಮಾಡಿ ದಾಖಲೆ ಪತ್ರಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ತೆರಿಗೆ ವಂಚನೆ ಮಾಡಿ ಚಿನ್ನದ ವ್ಯಾಪಾರ ಮಾಡುತ್ತಿದ್ದ ದೂರುಗಳ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಸುಮಾರು 300ಕ್ಕೂ ಹೆಚ್ಚು ಅಧಿಕಾರಿಗಳ ತಂಡ ವಿವಿಧ ಪ್ರದೇಶಗಳಲ್ಲಿ ನಡೆದಿರುವ ದಾಳಿಯಲ್ಲಿ ಪಾಲ್ಗೊಂಡಿದ್ದರು. ತಂಡ ತಂಡವಾಗಿ ಅಧಿಕಾರಿಗಳು ಚಿನ್ನಾಭರಣಗಳ ಅಂಗಡಿಗಳ ಮೇಲೆ ದಾಳಿ ಮಾಡಿದ್ದು, ಚಿನ್ನದ ವ್ಯಾಪಾರ, ತೆರಿಗೆ ಕಟ್ಟಿರುವ ರಶೀದಿ ಸೇರಿದಂತೆ ಇತರ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.