ಬೆಂಗಳೂರು,ಆ.9- ‘ಲ್ಯಾಂಡ್ ಮಾಡಬೇಡಿ, ಈ ವಿಮಾನದಲ್ಲಿ ಬಾಂಬ್ ಇದೆ’ ಎಂಬ ಬೆದರಿಕೆಯ ಸಂದೇಶವನ್ನು ಬರೆದ ಟಿಶ್ಯೂ ಪೇಪರ್ ಜೈಪುರ-ಬೆಂಗಳೂರು ಇಂಡಿಗೋ ವಿಮಾನದ ಶೌಚಾಯಲಯದಲ್ಲಿ ಪತ್ತೆಯಾಗಿದೆ.
ಮಾಹಿತಿ ಪಡೆದ ಬಾಂಬ್ ನಿಷ್ಕ್ರಿಯ ದಳ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಇಂಡಿಗೋ ವಿಮಾನದಲ್ಲಿ ಶೋಧ ನಡೆಸಿದ್ದಲ್ಲದೆ ಸುಮಾರು 174 ಪ್ರಯಾಣಿಕರು ಹಾಗು ಅವರುಗಳ ಬ್ಯಾಗ್‌ಗಳನ್ನು ತಪಾಸಣೆ ನಡೆಸಿದರು.
ಮಾತ್ರವಲ್ಲದೆ ಅಷ್ಟೂ ಪ್ರಯಾಣಿಕರ ಮತ್ತು 12 ಸಿಬ್ಬಂದಿಗಳ ಕೈಬರಹ ಪರೀಕ್ಷೆ ನಡೆಸಲಾಗಿಯಿತು. ಅದರಂತೆ ಇಬ್ಬರು ಪ್ರಯಾಣಿಕರನ್ನು ಶಂಕಿತರು ಎಂದು ಗುರುತಿಸಲಾಯಿತು. ಘಟನೆಯಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ವಿಮಾನದ ಸಿಬ್ಬಂದಿಯೊಬ್ಬರು ಹಿಂಭಾಗದ ಶೌಚಾಲಯದ ನೆಲದ ಮೇಲೆ ಹರಿದ ಟಿಶ್ಯೂ ಪೇಪರ್ ಅನ್ನು ನೋಡಿದರು. ಅದರಲ್ಲಿ ಬೆದರಿಕೆ ಸಂದೇಶವಿರುವುದನ್ನು ನೋಡಿದ ಸಿಬ್ಬಂದಿ ಕ್ಯಾಪ್ಟನ್‌ಗೆ ಮಾಹಿತಿ ನೀಡಿದರು. ಕೂಡಲೇ ಎಚ್ಚೆತ್ತ ಕ್ಯಾಪ್ಟನ್, ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಎಚ್ಚರಿಕೆ ನೀಡಿದರು. ಅದರಂತೆ ಸಿಐಎಸ್ಎಫ್ ತಂಡ ಕೆಲವೇ ನಿಮಿಷಗಳಲ್ಲಿ ಪರಿಶೀಲನೆಗೆ ಸಜ್ಜಾಯಿತು.
ಪ್ರಯಾಣಿಕರು ಭೀತಿಗೆ ಒಳಗಾಗಬಾರದು ಎಂದು ಯಾವುದೇ ಮಾಹಿತಿಯನ್ನು ನೀಡದೆ ವಿಮಾನವನ್ನು ಕಾರ್ಗೋ ಟರ್ಮಿನಲ್ ಬಳಿಯ ಪ್ರತ್ಯೇಕ ಕೊಲ್ಲಿಗೆ ಕೊಂಡೊಯ್ಯಲಾಯಿತು.
ನಂತರ ಪ್ರಯಾಣಿಕರನ್ನು ಟರ್ಮಿನಲ್ಗೆ ಕರೆದೊಯ್ದು ಪ್ರಯಾಣಿಕರ ಬ್ಯಾಗ್‌ಗಳನ್ನು ವಿಮಾನದಿಂದ ಹೊರತೆಗೆದು ಲೋಹದ ಶೋಧಕಗಳೊಂದಿಗೆ ಪರಿಶೀಲಿಸಲಾಯಿತು. ಸುಮಾರು 1 ಗಂಟೆಗಳ ಕಾಲ ನಡೆದ ಶೋಧಕಾರ್ಯ ನಂತರ ಇದು ಸುಳ್ಳು ಬೆದರಿಕೆ ಎಂದು ಘೋಷಿಸಲಾಯಿತು.
ಶಂಕಿತರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸಿಐಎಸ್ಎಫ್ ತಂಡವು ಪ್ರಯಾಣಿಕರ ಕೈಬರಹವನ್ನು ಪರೀಕ್ಷೆ ನಡೆಸಿದ್ದು, ಹಿಂದಿಯಲ್ಲಿ ಬರೆಯಲು ಬರದವರನ್ನು ಪರೀಕ್ಷೆಯಿಂದ ಹೊರಗಿಡಲಾಯಿತು. ನಂತರ ಇಪ್ಪತ್ತು ಜನರನ್ನು ಶಾರ್ಟ್‌ಲಿಸ್ಟ್ ಮಾಡಿ ಪರೀಕ್ಷೆ ನಡೆಸಲಾಗಿದ್ದು, ಅಂತಿಮವಾಗಿ ಇಬ್ಬರು ಶಂಕಿತರನ್ನು ಪತ್ತೆಹಚ್ಚಿ ಬರವಣಿಗೆ ಬಗ್ಗೆ ಪ್ರಶ್ನಿಸಲಾಯಿತು. ಎರಡು ಗಂಟೆಗಳ ವಿಳಂಬದ ನಂತರ ಎಲ್ಲಾ ಪ್ರಯಾಣಿಕರನ್ನು ಮನೆಗೆ ಹೋಗಲು ಅನುಮತಿಸಲಾಯಿತು. ಇಬ್ಬರು ಶಂಕಿತರ ತನಿಖೆ ಮುಂದುವರಿದಿದೆ.
ಜೈಪುರದಿಂದ ಇಂಡಿಗೋ ವಿಮಾನ 6ಇ-556 ಭಾನುವಾರ ರಾತ್ರಿ 9.26 ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನದಲ್ಲಿ ಈ ಬೆದರಿಕೆ ಸಂದೇಶ ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. “ನೀಲಿ ಶಾಯಿಯಲ್ಲಿ ‘ವಿಮಾನವನ್ನು ಲ್ಯಾಂಡ್ ಮಾಡಬೇಡಿ, ಈ ವಿಮಾನದಲ್ಲಿ ಬಾಂಬ್ ಇದೆ’ ಎಂದು ಬರೆದಿರುವ ಟಿಶ್ಯೂ ಪೇಪರ್ ಪತ್ತೆಯಾಗಿರುವುದಾಗಿ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಅನೂಪ್ ಎ ಶೆಟ್ಟಿ ಹೇಳಿದ್ದಾರೆ. ಬೆದರಿಕೆ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿಸಿದ್ದಾರೆ.
ವಿಮಾನದಲ್ಲಿ ಬಾಂಬ್- ಬೆದರಿಕೆ ಪತ್ರ ಸೃಷ್ಟಿಸಿದ ಆತಂಕ..
Previous Articleಚಾಲೆಂಜಿಂಗ್ ಸ್ಟಾರ್ ದರ್ಶನ್ ಧಮ್ಕಿ ಪೊಲೀಸರಿಗೆ ನಿರ್ಮಾಪಕನ ದೂರು
Next Article ಬಿಜೆಪಿಯಲ್ಲಿ ಬದಲಾವಣೆಯ ಪರ್ವ..?