ಕಾರವಾರ,ಸೆ.12-ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಹಾಯಕ ವ್ಯವಸ್ಥಾಪಕನೇ ಬ್ಯಾಂಕಿನ ಖಾತೆಯಿಂದ ತನ್ನ ಪತ್ನಿಯ ಖಾತೆಗೆ 2.69 ಕೋಟಿ ರೂ. ವರ್ಗಾವಣೆ ಮಾಡಿ ಪರಾರಿಯಾಗಿದ್ದಾನೆ.
ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕ ಆಂಧ್ರಪ್ರದೇಶ ಮೂಲದ ಕುಮಾರ ಕೃಷ್ಣಮೂರ್ತಿ ಬೋನಾಲ ಎಂಬಾತ ಕಳೆದ ಏಪ್ರಿಲ್ 7 ರಿಂದ ಸೆ.9 ರವರೆಗಿನ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ತನ್ನ ಪತ್ನಿಯ ಖಾತೆಗೆ ವರ್ಗಾವಣೆ ಮಾಡಿ ನಾಪತ್ತೆಯಾಗಿದ್ದಾನೆ.
ಬ್ಯಾಂಕ್ ಸಿಬ್ಬಂದಿಯ ಲಾಗಿನ್ ಐಡಿಯನ್ನು ಅವರ ಗಮನಕ್ಕೆ ಬಾರದಂತೆ ಉಪಯೋಗಿಸಿಕೊಂಡು ಆಂಧ್ರದ ಚಿರಲಾದ ಎಸ್‍ಬಿಐ ಬ್ಯಾಂಕ್‍ನಲ್ಲಿ ಖಾತೆ ಹೊಂದಿರುವ ಪತ್ನಿ ರೇವತಿ ಪ್ರಿಯಾಂಕ ಗೊರ್ರೆಯ ಖಾತೆಗೆ 2.69 ಕೋಟಿ ರೂ. ವರ್ಗಾವಣೆ ಮಾಡಿ ನಾಪತ್ತೆಯಾಗಿದ್ದಾನೆ.
ಈ ಕುರಿತು ಶಾಖಾ ವ್ಯವಸ್ಥಾಪಕ ವಿಶ್ವೇಶ್ವರ ಭಟ್ ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.