ಬೆಂಗಳೂರು,ಜೂ.7- ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿರುವ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಸರ್ಕಾರ ಸಾಮಾನ್ಯರ ಅಭಿಪ್ರಾಯ ಪಡೆಯಲು ತೀರ್ಮಾನಿಸಿದೆ.
ವಿವಾದದ ಹಿನ್ನೆಲೆಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗಳು ಯಾವ ಪಠ್ಯವನ್ನು ತೆಗೆದು ಯಾವುದನ್ನು ಸೇರ್ಪಡೆ ಮಾಡಿದ್ದರು ಎಂಬ ವಿವರಗಳನ್ನು ಸಾರ್ವಜನಿಕರಿಗೆ ಮಾಹಿತಿ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಈ ಮಾಹಿತಿಯನ್ನು ಸದ್ಯದಲ್ಲಿಯೇ ಶಿಕ್ಷಣ ಇಲಾಖೆಯು ಕರ್ನಾಟಕ ಪಠ್ಯಪುಸ್ತಕ ಸಂಘದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಿದ್ದು ಬಳಿಕ ಎರಡೂ ವಿಚಾರವಾಗಿ ಸಾರ್ವಜನಿಕರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಅಗತ್ಯಬಿದ್ದರೆ ಸಾರ್ವಜನಿಕರೊಂದಿಗೆ ಚರ್ಚಿಸಿ ಪುಸ್ತಕದಲ್ಲಿ ಯಾವ ವಿಷಯಗಳನ್ನು ಸೇರ್ಪಡೆ ಮಾಡಬೇಕು ಮತ್ತು ಬಿಡಬೇಕು ಎಂಬ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದರು.