ಬೆಂಗಳೂರು, ಡಿ.8- ಕಳೆದ ಐದು ವರ್ಷಗಳಿಂದ ಪ್ರಯಾಣಿಕರು ಬಿಟ್ಟು ಹೋದ ವಸ್ತುಗಳನ್ನು ಮರಳಿ ಪಡೆಯದ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್)ವು ಹರಾಜು ಹಾಕಿ ಲಕ್ಷಾಂತರ ರೂಗಳನ್ನು ಸಂಗ್ರಹಿಸಿದೆ.
ನಮ್ಮ ಮೆಟ್ರೋ ಪ್ರಯಾಣಿಕರು ನಿಲ್ದಾಣ ಹಾಗೂ ರೈಲಿನಲ್ಲಿ ಬಿಟ್ಟು ಹೋದ ವಸ್ತುಗಳನ್ನು ಹರಾಜು ಹಾಕಿರುವ ರೈಲು ನಿಗಮವು 7.4 ಲಕ್ಷ ರೂಪಾಯಿಗಳನ್ನು ಗಳಿಸಿದೆ.
ಮೆಟ್ರೋ ಪ್ರಯಾಣಿಕರು ಬಿಟ್ಟು ಹೋದ ಸುಮಾರು 6,354 ವಸ್ತುಗಳನ್ನು ಮರಳಿ ಪಡೆಯದ ಹಿನ್ನೆಲೆಯಲ್ಲಿ ಹರಾಜು ಮಾಡಲಾಗಿದೆ. ನೀರಿನ ಬಾಟಲಿ, ಹೆಲ್ಮೆಟ್‌ಗಳು, ಊಟದ ಬಾಕ್ಸ್‌ಗಳು, ಬ್ಯಾಗ್, ಛತ್ರಿಯಂತಹ ಇನ್ನಿತರ ವಸ್ತುಗಳನ್ನು ಹರಾಜು ಮಾಡಲಾಗಿದೆ ಎನ್ನಲಾಗಿದೆ. ನೇರಳೆ ಮಾರ್ಗದಲ್ಲಿನ ಒಟ್ಟು 1,402 ವಸ್ತುಗಳು ಮತ್ತು ಹಸಿರು ಮಾರ್ಗದಲ್ಲಿನ 4,952 ವಸ್ತುಗಳನ್ನು ಹರಾಜು ಮಾಡಲಾಗಿದೆ ಕೆಲ ಪ್ರಯಾಣಿಕರು ತಮ್ಮ ಬಳಿಯಿದ್ದ ಗ್ಯಾಜೆಟ್‌ಗಳನ್ನು ಬಿಟ್ಟು ಹೋಗಿದ್ದಾರೆ. ಕೆಲವರು ಕಳೆದುಕೊಂಡು ಇರಬಹುದು ಅಥವಾ ಮರೆತು ಬಿಟ್ಟು ಹೋಗಿರಬಹುದು. ಹೀಗೆ ಪತ್ತೆಯಾದ ಗ್ಯಾಜೆಟ್‌ಗಳನ್ನು ನಿಲ್ದಾಣದ ಸಿಬ್ಬಂದಿಗೆ ನೀಡಲಾಗುತ್ತದೆ. ನಿಲ್ದಾಣದ ಸಿಬ್ಬಂದಿಯನ್ನು ಸಂಪರ್ಕಿಸಿದರೆ ಅದು ಅವರದ್ದೇ ಎಂದು ಪರಿಶೀಲಿಸಿ ಖಚಿತವಾದರೆ ಅವುಗಳನ್ನು ಮಾಲೀಕರಿಗೆ ಹಸ್ತಾಂತರ ಮಾಡಲಾಗುತ್ತದೆ. ಇನ್ನು ಸುರಕ್ಷತೆ ದೃಷ್ಟಿಯಿಂದ ಬಿಎಂಆರ್‌ಸಿಎಲ್ ಅಧಿಕಾರಿಗಳು ಗ್ಯಾಜೆಟ್‌ಗಳನ್ನು ಹರಾಜು ಮಾಡಿಲ್ಲ. ಬದಲಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಛತ್ರಿ, ಬ್ಯಾಗ್, ಊಟದ ಬಾಕ್ಸ್, ಬಾಟಲಿಗಳಂತಹ ವಸ್ತುಗಳನ್ನು ಸಂಗ್ರಹಿಲು ಆಸಕ್ತಿ ತೋರುವುದಿಲ್ಲ. ಸದ್ಯ ಇಂತಹ ವಸ್ತುಗಳನ್ನು ಬಿಎಂಆರ್‌ಸಿಎಲ್ ಪ್ರತಿ ಆರು ತಿಂಗಳಿಗೊಮ್ಮೆ ಹರಾಜು ಹಾಕುತ್ತದೆ. ಇನ್ನೂ ಕೆಲವೊಮ್ಮೆ ಪ್ರಯಾಣಿಕರು ಬೆಳ್ಳಿ ಮತ್ತು ಚಿನ್ನದ ವಸ್ತುಗಳನ್ನು ಸಹ ಕೇಳಲು ವಾಪಾಸ್ ಬರದ ನಿದರ್ಶನಗಳಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು ಈ ವಸ್ತುಗಳನ್ನು ಹರಾಜಿಗೂ ಮೊದಲು ಬಿಎಂಆರ್‌ಸಿಎಲ್ ಹರಾಜಿನ ವಸ್ತುಗಳ ಕುರಿತು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತದೆ. ವಸ್ತು ಕಳೆದುಕೊಂಡವರು ಅಧಿಕಾರಿಗಳನ್ನು ಸಂಪರ್ಕಿಸುವ ಅವಕಾಶವಿದೆ. ಒಂದು ವೇಳೆ ಯಾವುದೇ ಕರೆಗಳು ಬರದೇ ಇದ್ದಾಗ ಹರಾಜು ಮಾಡಲಾಗುತ್ತದೆ.