ಬೆಂಗಳೂರು,ಜು.29- ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ ಬಂಧಿತರಾಗಿರುವ ಐವರು ಶಂಕಿತ ಉಗ್ರರು ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಶಂಕಿತ ಉಗ್ರ ಕೇರಳ ಮೂಲದ ಟಿ. ನಾಸೀರ್‌ನನ್ನು ಮುಖಾಮುಖಿಯಾಗಿಸಿ ಸಿಸಿಬಿ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.
2008ರ ಬೆಂಗಳೂರಿನ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ನಾಸಿರ್‌ನನ್ನು ಎಂಟು ದಿನಗಳ ಕಸ್ಟಡಿಗೆ ಪಡೆದಿರುವ ಸಿಸಿಬಿ ಅಧಿಕಾರಿಗಳು ನಿನ್ನೆ ಜೈಲಿನಿಂದ ಆತನನ್ನು ಕರೆತಂದು ಮಡಿವಾಳದ ವಿಚಾರಣಾ ಕೇಂದ್ರದಲ್ಲಿಟ್ಟು ತೀವ್ರ ವಿಚಾರಣೆ ನಡೆಸಿದ್ದಾರೆ.
ವಿಧ್ವಂಸಕ ಕೃತ್ಯಕ್ಕೆ ಸಿದ್ಧತೆ ನಡೆಸಿದ್ದಾಗ ಬಂಧಿತರಾಗಿದ್ದ ಐವರು ಆರೋಪಿಗಳು ವಿಚಾರಣೆ ವೇಳೆ ತಮ್ಮ ಪಾತ್ರಗಳ ಕುರಿತು ಬಾಯ್ಬಿಟ್ಟಿದ್ದಾರೆ. ಈ ಎಲ್ಲ ಮಾಹಿತಿಯನ್ನು ಕ್ರೋಡೀಕರಿಸಿ ನಸೀರ್‌ನನ್ನು ಪ್ರಶ್ನಿಸಲಾಗುತ್ತಿದೆ. ಮೊದಲ ದಿನ ಆತ ವಿಚಾರಣೆಗೆ ತಡವರಿಸಿದ್ದು, ಮುಂದಿನ ಹಂತದಲ್ಲಿ ಆತ ನೀಡುವ ಹೇಳಿಕೆ ಆಧರಿಸಿ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ನಸೀರ್‌ನನ್ನು 8 ದಿನಗಳು ಕಸ್ಟಡಿಗೆ ಪಡೆಯಲಾಗಿದ್ದು, ಇನ್ನುಳಿದ ಐವರ ಕಸ್ಟಡಿ ಅವಧಿಯನ್ನು ಮತ್ತೆ 10 ದಿನಗಳಿಗೆ ನ್ಯಾಯಾಲಯವು ಮುಂದುವರೆಸಿರುವುದರಿಂದ ಹೆಚ್ಚಿನ ಹೀಗಾಗಿ ಸಮಯಾವಕಾಶ ದೊರೆತಿದ್ದು, ಹಂತ ಹಂತವಾಗಿ ಪ್ರಶ್ನಿಸಲಾಗುತ್ತದೆ. ವಿಚಾರಣೆ ವೇಳೆ ನಸೀರ್ ಹಾಗೂ ಆತನ ಐವರು ಸಹಚರರನ್ನು ಮುಖಾಮುಖಿಯಾಗಿಸಿ ಕೂಡಾ ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಿದ್ದ ಜು.19 ರಂದು ಹೆಬ್ಬಾಳ ಸಮೀಪದ ಸುಲ್ತಾನ್ ಪಾಳ್ಯದಲ್ಲಿ ಸೈಯದ್ ಸುಹೇಲ್‌ಖಾನ್, ಪುಲಿಕೇಶಿ ನಗರದ ಮೊಹಮದ್ ಫೈಜಲ್ ರಬ್ಬಾನಿ, ಕೊಡಿಗೇಹಳ್ಳಿಯ ಮಹಮದ್ ಉಮರ್, ಜಾಹೀದ್ ತಬ್ರೇಜ್ ಹಾಗೂ ಆರ್.ಟಿ.ನಗರದ ಸೈಯದ್ ಮುದಾಸೀರ್ ಪಾಷರನ್ನು ಸಿಸಿಬಿ ಬಂಧಿಸಿತ್ತು.
ವಿಚಾರಣೆ ವೇಳೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈ ಐವರನ್ನು ಎಲ್‌ಇಟಿ ಸಂಘಟನೆಗೆ ಕೇರಳ ಮೂಲದ ನಸೀರ್ ನೇಮಕಗೊಳಿಸಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಅಲ್ಲದೆ ವಿಧ್ವಂಸಕ ಕೃತ್ಯದ ಸಂಚಿನ ರೂವಾರಿ ಸಹ ನಸೀರ್ ಆಗಿದ್ದಾನೆ ಎಂಬುದು ಗೊತ್ತಾಗಿತ್ತು. ಹೀಗಾಗಿ ತನಿಖೆಗೆ ಆತನನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸುತ್ತಿದೆ.
ಬ್ಯಾಂಕ್ ಖಾತೆಗಳ ವಿವರ:
ವಿಧ್ವಂಸಕ ಕೃತ್ಯ ನಡೆಸಲು ಬಂಧಿತ ಐವರು ಶಂಕಿತ ಉಗ್ರರಿಗೆ ವಿದೇಶದಲ್ಲಿರುವ ಮಹಮ್ಮದ್ ಜುನೈದ್ ಆರ್ಥಿಕ ನೆರವು ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ಹಣಕಾಸು ವಹಿವಾಟಿನ ಬಗ್ಗೆ ಅಧಿಕೃತ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಪತ್ರ ಬರೆದು ಮಾಹಿತಿ ಪಡೆಯಲಾಗಿದೆ.
ಎಲ್ಲಾ ಆರೋಪಿಗಳು ಒಂದೊಂದೇ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಇದುವರೆಗೆ ಆರೋಪಿಗಳಿಗೆ ವಿದೇಶದಿಂದ ಎಷ್ಟುಹಣ ಬಂದಿದೆ ಎಂಬುದು ಖಚಿತವಾಗಿಲ್ಲ.
ಕೆಲವರು 25 ಲಕ್ಷ ರೂ,15 ಲಕ್ಷ ರೂ. ಹೀಗೆ ಒಂದೊಂದು ರೀತಿ ಮಾತುಗಳು ಕೇಳಿ ಬಂದಿವೆ. ಆದರೆ ನಿಖರವಾಗಿ ಬ್ಯಾಂಕ್ ಖಾತೆಗಳ ಪರಿಶೀಲನೆ ಬಳಿಕ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ