ಬೆಂಗಳೂರು, ಡಿ.8- ದೇಶದಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನ ಹಾಗೂ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದ ಕುಖ್ಯಾತಿಗೆ ಪಾತ್ರವಾಗಿದೆ.
ದೇಶದಲ್ಲಿ ಕಳೆದ 2021ರಲ್ಲಿ 52,974 ಸೈಬರ್ ಪ್ರಕರಣಗಳು (Cyber Crime) ದಾಖಲಾಗಿದ್ದರೆ, 2022ರಲ್ಲಿ 65,893 ಕೇಸ್ ದಾಖಲಾಗಿದ್ದು, ಅವುಗಳಲ್ಲಿ ಕರ್ನಾಟಕ 2ನೇ ಸ್ಥಾನ ಹಾಗೂ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ.
ಕಳೆದ 2022ನೇ ಸಾಲಿನಲ್ಲಿ ತೆಲಂಗಾಣದಲ್ಲಿ 15,297 ಕೇಸ್‌ಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. 12,556 ಪ್ರಕರಣಗಳು ದಾಖಲಾಗಿರುವ ಕರ್ನಾಟಕ ಮತ್ತು 10,117 ಪ್ರಕರಣಗಳನ್ನು ದಾಖಲಾಗಿರುವ ಉತ್ತರ ಪ್ರದೇಶ ರಾಜ್ಯಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.
ಸೈಬರ್ ಅಪರಾಧಗಳಷ್ಟೇ ಅಲ್ಲದೇ ಶೇ.11ರಷ್ಟು ಆರ್ಥಿಕ ಅಪರಾಧ ಪ್ರಕರಣಗಳು, ಶೇ. 9ರಷ್ಟು ಹಿರಿಯ ನಾಗರಿಕರ ವಿರುದ್ಧದ ಅಪರಾಧ ಪ್ರಕರಣಗಳು, ಶೇ.4ರಷ್ಟು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಳವಾಗಿರುವ ಮಾಹಿತಿಯನ್ನು ಇತ್ತೀಚಿಗೆ ಬಿಡುಗಡೆಯಾಗಿರುವ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ವರದಿ ಬಹಿರಂಗಗೊಳಿಸಿದೆ.
ಬೆಂಗಳೂರಿನಲ್ಲಿ ಹೆಚ್ಚು:
ದೇಶದ ಮಹಾನಗರಗಳಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳ ಪೈಕಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 2021ರಲ್ಲಿ 6,423 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 9,940 ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. 4724 ಪ್ರಕರಣಗಳು ದಾಖಲಾಗಿರುವ ಮುಂಬೈ ಮತ್ತು 4436 ಪ್ರಕರಣಗಳು ದಾಖಲಾಗಿರುವ ಹೈದರಾಬಾದ್ 2 ಮತ್ತು 3ನೇ ಸ್ಥಾನದಲ್ಲಿವೆ.
ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳಲ್ಲಿಯೂ ಕರ್ನಾಟಕ ಮೊದಲನೇ ಸ್ಥಾನ ಪಡೆದ ಕುಖ್ಯಾತಿಗೊಳಗಾಗಿದೆ. 2022ನೇ ಸಾಲಿನಲ್ಲಿ ಮಕ್ಕಳನ್ನೊಳಗೊಂಡ ಅಶ್ಲೀಲ ವಿಡಿಯೋಗಳ ಚಿತ್ರೀಕರಣ ಹಾಗೂ ಪ್ರಕಟಿಸುವ ಅಪರಾಧ ಸೇರಿದಂತೆ ಮಕ್ಕಳ ಮೇಲಿನ 239 ಸೈಬರ್ ಅಪರಾಧ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ತಲಾ 182 ಪ್ರಕರಣಗಳನ್ನು ಹೊಂದಿರುವ ಕೇರಳ ಹಾಗೂ ರಾಜಸ್ಥಾನ ಎರಡನೇ ಸ್ಥಾನದಲ್ಲಿದ್ದರೆ, 178 ಪ್ರಕರಣಗಳಿರುವ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.