ಬೆಂಗಳೂರು,ಮಾ.15-
ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಳೆಯಿಂದ ಲೋಡ್ ಶೆಡ್ಡಿಂಗ್ ಸಹಿತ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದ ನೌಕರರ ಒತ್ತಡಕ್ಕೆ ಸರ್ಕಾರ ಮಣಿದಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ಎಲ್ಲಾ ಎಸ್ಕಾಂಗಳ ನೌಕರರ ವೇತನವನ್ನು ಶೇ.20 ರಷ್ಟು ಹೆಚ್ಚಳ ಮಾಡಿ ಪರಿಷ್ಕೃತ ಆದೇಶ ಹೊರಡಿಸಿದೆ.
ಕಳೆದ 2022 ಏಪ್ರಿಲ್ ತಿಂಗಳಿನಿಂದ ಪೂರ್ವಾನ್ವಯ ಆಗುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಸ್ಕಾಂ, ಚೆಸ್ಕಾಂ, ಎಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯ ಎಲ್ಲ ನೌಕರರಿಗೂ ಇದು ಅನ್ವಯವಾಗಲಿದೆ.
ಈಗಿರುವ ವೇತನದ ಮೇಲೆ 2022 ಏಪ್ರಿಲ್ ತಿಂಗಳಿನಿಂದ ಶೇ.20ರಷ್ಟು ವೇತನ ಪರಿಷ್ಕರಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಎಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಕ್ಕೂಟದ ಅಧ್ಯಕ್ಷರು ಮತ್ತು ಪಧಿದಾಕಾರಿಗಳ ಜೊತೆ ಚರ್ಚಿಸಿ ಅಂತಿಮವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಿದ ನಂತರ ವೇತನ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.