ಬೆಂಗಳೂರು,ಸೆ.23- ಬೆಸ್ಕಾಂ ನ ಗ್ರಾಹಕರಿಗೆ ಮತ್ತೆ ದರ ಹೇರಿಕೆಯ ಬರೆ ಹಾಕಲಾಗಿದೆ.ಕಲ್ಲಿದ್ದಲು ಖರೀದಿ ದರ ಹೆಚ್ಚಳವಾದ ಹಿನ್ನಲೆಯಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್ ನಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳ ಅವಧಿಗೆ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆದೇಶ ಹೊರಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ,ಕಳೆದ ಜುಲೈ ನಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಆರು ತಿಂಗಳ ಅವಧಿಗೆ 31 ಪೈಸೆಯಷ್ಷು ಬೆಸ್ಕಾಂಗೆ ಅನ್ವಯಿಸುವಂತೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿತ್ತು. ಇದೀಗ ಕಲ್ಲಿದ್ದಲು ಖರೀದಿ ವೆಚ್ಚದಲ್ಲಿ ಗಣನೀಯ ಏರಿಕೆಯಾದ ಹಿನ್ನೆಲೆಯಲ್ಲಿ 43 ಪೈಸೆ ಹೆಚ್ಚಳ ಮಾಡಲಾಗಿದ್ದು, ಈ ಮೊತ್ತವನ್ನು ಅಕ್ಟೋಬರ್ ನಿಂದ ಮುಂದಿನ ಮಾರ್ಚ್ 2023 ರವರೆಗೆ ಸಂಗ್ರಹಿಸಲಾಗುತ್ತದೆ ಎಂದು ವಿವರಿಸಿದರು.
ಕೆಇಆರ್‌ಸಿ ಸೆ.19ರಂದು ಹೊರಡಿಸಿದ ಆದೇಶದನ್ವಯ ಇಂಧನ ಹೊಂದಾಣಿಕೆ ಶುಲ್ಕ 43 ಪೈಸೆಯನ್ನು ಮುಂದಿನ 6 ತಿಂಗಳ ಅವಧಿಗೆ ಗ್ರಾಹಕರಿಂದ ಸಂಗ್ರಹಿಸಲು ಬೆಸ್ಕಾಂಗೆ ಅನುಮತಿ ನೀಡಿದೆ.
ಕೆಇಆರ್‌ಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು) ನಿಯಮಗಳು, 2013 ರ ಅನ್ವಯ ಇಂಧನ ಹೊಂದಾಣಿಕೆ ಶುಲ್ಕವನ್ನು 43 ಪೈಸೆ ಹೆಚ್ಚಳ ಮಾಡಿ ಬೆಸ್ಕಾಂಗೆ ಅನ್ವಯ ಆಗುವಂತೆ ಪರಿಷ್ಕರಿಸಲಾಗಿದೆ ಎಂದು ಹೇಳಿದರು.
ಈ ಮೊದಲು ಪ್ರತಿ ಮೂರು ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ. ಆದರೆ ಗ್ರಾಹಕರಿಗೆ ಹೆಚ್ಚವರಿ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಈ ಶುಲ್ಕವನ್ನು ಆರು ತಿಂಗಳಿಗೆ ಅನ್ವಯಿಸುವಂತೆ ಪರಿಷ್ಕರಿಸಲಾಗಿದೆ ಎಂದು ಬೆಸ್ಕಾಂ ಎಂಡಿ ತಿಳಿಸಿದರು.