ಬೆಂಗಳೂರು: ರಾಜ್ಯದಲ್ಲಿ ಕಮಾಲ್ ಮಾಡುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದ ಆಮ್ ಆದ್ಮಿ ಪಕ್ಷಕ್ಕೆ ಚುನಾವಣೆಗೂ ಮುನ್ನವೇ ಭಾರಿ ಹಿನ್ನಡೆ ಉಂಟಾಗಿದೆ.
ಪೊಲೀಸ್ ಇಲಾಖೆಯ ಉನ್ನತ ಹುದ್ದೆ ತೊರೆದು ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿ
ಜನ ಸೇವೆ ಮಾಡುವ ಕನಸು ಕಂಡಿದ್ದ ಭಾಸ್ಕರ್ ರಾವ್ ಇದೀಗ ಆಮ್ ಆದ್ಮಿ ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಭಾಸ್ಕರ್ ರಾವ್ ಕರ್ನಾಟಕದಲ್ಲಿ ಆ ಪಕ್ಷ ಮುನ್ನಡೆಸುವ ಮಹತ್ವಾಕಾಂಕ್ಷೆ ಹೊಂದಿದ್ದರು. ಆದರೆ ರಾಜ್ಯದ ಆಪ್ ಘಟಕದಲ್ಲಿ ಇದಕ್ಕೆ ಅವಕಾಶ ಸಿಗಲಿಲ್ಲ ಎನ್ನಲಾಗಿದೆ.
ಪಕ್ಷದ ರಾಜ್ಯ ಘಟಕದಲ್ಲಿರುವ ಅನೇಕ ಮುಂಚೂಣಿ ನಾಯಕರು ಪಕ್ಷ ಸಂಘಟನೆಗಿಂತ ಬೇರೆ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಸಂಘಟನೆಗಾಗಿ ದೆಹಲಿಯಿಂದ ಬರುವ ನಿಧಿಯನ್ನು ತಮ್ಮ ವಯಕ್ತಿಕ ವೆಚ್ಚಗಳಿಗೆ ಬಳಸುತ್ತಿದ್ದಾರೆ.ಇದರಲ್ಲಿ ಕೆಲವರು ಸಂಬಳ ಕೂಡ ನಿಗದಿ ಪಡಿಸಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದೆ.ಇದನ್ನು ಪಕ್ಷದ ವೇದಿಕೆಯಲ್ಲಿ ಪ್ರಶ್ನಿಸಿದ ಭಾಸ್ಕರ್ ರಾವ್ ಅವರನ್ನು ಪಕ್ಷದ ಚಟುವಟಿಕೆಗಳಿಂದ ದೂರವಿರಿಸಲಾಗಿತ್ತು ಎನ್ನಲಾಗಿದೆ
ಈ ಎಲ್ಲಾ ಬೆಳವಣಿಗೆಗಳಿಂದ ಬೇಸರಗೊಂಡಿರುವ ಅವರು ಆಪ್ ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಲಿದ್ದಾರೆನ್ನಲಾಗಿದೆ.
ಭಾಸ್ಕರ್ ರಾವ್ ಅವರು ರಾಜಕೀಯ ಪಕ್ಷ ಸೇರಿ ಚುನಾವಣೆ ಸ್ಪರ್ಧಿಸುವ ಉದ್ದೇಶದಿಂದ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಸ್ವೀಕಾರಗೊಂಡ ಬಳಿಕ ಅವರು ಆಮ್‌ಆದ್ಮಿ ಪಕ್ಷ ಸೇರಿದ್ದರು. ಬಸವನಗುಡಿಯಿಂದ ಸ್ಪರ್ಧಿಸುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಅವರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದರು ಮತ್ತು ಪಕ್ಷದಲ್ಲೂ ಸಕ್ರಿಯರಾಗಿದ್ದರು. ಆದರೆ ಕಳೆದ ಒಂದೆರಡು ತಿಂಗಳಿಂದ ಅವರು ಪಕ್ಷದಲ್ಲಿ ಅಷ್ಟಾಗಿ ಸಕ್ರಿಯರಾಗಿರಲಿಲ್ಲ.ಇದೀಗ ಅವರು ಸಚಿವ ಆರ್.ಅಶೋಕ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ಅವರು ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಸೇರಿ ಹಲವು ನಾಯಕರ ಜತೆ ಮಾತುಕತೆ ನಡೆಸಿದ್ದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
AAP ಗೆ ಭಾಸ್ಕರ್ ರಾವ್ ಗುಡ್ ಬೈ-BJP ಸೇರಲು ನಿರ್ಧಾರ
Previous Articleಸ್ನೇಹಿತರ ಸವಾಲ್!
Next Article BJP ವಿಜಯಸಂಕಲ್ಪ ರಥ ಯಾತ್ರೆಗೆ ಚಾಲನೆ #vijayasankalpa