ಬೆಂಗಳೂರು,ಸೆ.26-
ಸಂಘ ಪರಿವಾರ ನಾಯಕರ ಮಧ್ಯ ಪ್ರವೇಶದ ನಂತರವೂ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತದ ಬೇಗುದಿ ಶಮನವಾಗಿಲ್ಲ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮೇಲ್ನೋಟಕ್ಕೆ ಒಟ್ಟಾಗಿದ್ದೇವೆ ಎಂದು ತೋರಿಸಿಕೊಂಡರು ಕೂಡ ಇಬ್ಬರ ನಡುವೆ ತಾಳ-ಮೇಳ ಇಲ್ಲ. ಇನ್ನು ಇವರಿಬ್ಬರ ನಾಯಕತ್ವವನ್ನು ಧಿಕ್ಕರಿಸಿರುವ ಮುಖಂಡರು ಯಾವುದೇ ಸೂಚನೆಗೂ ಬಗ್ಗುತ್ತಿಲ್ಲ.
ಎಲ್ಲರನ್ನೂ ಒಂದೇ ವೇದಿಕೆಗೆ ಕರೆತಂದು ಭಿನ್ನಮತಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ ಸಂಘ ಪರಿವಾರದ ನಾಯಕರ ಪ್ರಯತ್ನಕ್ಕೆ ಭಿನ್ನಮತಿಯ ನಾಯಕರು ಯಾವುದೇ ರೀತಿಯಲ್ಲೂ ತಲೆಕೆಡಿಸಿಕೊಂಡಿಲ್ಲ ತಮ್ಮ ಪಟ್ಟು ಸಡಿಲಿಸಿಲ್ಲ.
ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೋರ್ಟ್ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ ಆರಂಭಿಸಿದೆ ಇದನ್ನು ತೀವ್ರಗೊಳಿಸುವ ದೃಷ್ಟಿಯಿಂದ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು
ಈ ಪ್ರತಿಭಟನೆಗೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳು ಕಡ್ಡಾಯವಾಗಿ ಬರಬೇಕೆಂದು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೂಚನೆ ಕೊಟ್ಟಿದ್ದರು.
ಆದರೆ ಈ ಸೂಚನೆಗೆ ಬಹುತೇಕ ನಾಯಕರು ಸೊಪ್ಪು ಹಾಕಿಲ್ಲ. ಬೆಂಗಳೂರಿನಲ್ಲಿಯೇ ಇದ್ದ ಶಾಸಕರಾದ ಎಸ್ ಆರ್ ವಿಶ್ವನಾಥ್ ಬಸನಗೌಡ ಪಾಟೀಲ್ ಯತ್ನಾಳ್ ರಮೇಶ್ ಜಾರಕಿಹೊಳಿ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಕುಮಾರ್ ಬಂಗಾರಪ್ಪ ಮಾಜಿ ಸಂಸದರಾದ ಪ್ರತಾಪ ಸಿಂಹ ಅಣ್ಣ ಸಾಹೇಬ ಜೊಲ್ಲೆ ಸೇರಿದಂತೆ ಹಲವಾರು ಮುಖಂಡರು ಈ ಪ್ರತಿಭಟನೆಯಿಂದ ದೂರ ಉಳಿದರು