ಬೆಂಗಳೂರು – ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ.ಇಲ್ಲಿ ಬಿಜೆಪಿ ಕಾರ್ಯಕರ್ತರಾಗಿರುವ ವಕೀಲರು ದರ್ಬಾರ್ ಮಾಡುತ್ತಿದ್ದಾರೆ.
ಹೀಗೊಂದು ಮಾತು ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.ಅಷ್ಟೇ ಇಲ್ಲ ಇದರ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಅಸಮಧಾನ ಕೂಡ ಭುಗಿಲೇಳುತ್ತಿದೆ.
ಬಹಳ ದಿನಗಳ ನಂತರ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್‍ನಲ್ಲಿ ಹಲವಾರು ರೀತಿಯ ಹಪಾಹಪಿಗಳು ಕೇಳಿಬರುತ್ತಿವೆ. ಕಾರ್ಯಕರ್ತರ ಧಾವಂತ ಹಾಗೂ ಒತ್ತಡಗಳಿಗೆ ಸಚಿವರು ಸ್ಪಂದಿಸದೇ ಇರುವುದು ಈ ಚಡಪಡಿಕೆಗೆ ಕಾರಣವಾಗಿದೆ.
ಸರ್ಕಾರ ರಚನೆಯಾಗಿ ತಿಂಗಳುಗಳು ಕಳೆದಿವೆ ಸುಮಾರು 5 ವರ್ಷಗಳ ಬಳಿಕ ಅಧಿಕಾರದ ಅಂಗಳಕ್ಕೆ ಕಾಲಿಟ್ಟ ಕಾಂಗ್ರೆಸಿಗರಲ್ಲಿ ಹಲವಾರು ನಿರೀಕ್ಷೆಗಳಿದ್ದವು. ಆದರೆ ಅವುಗಳಿಗೆ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ಅದರಲ್ಲೂ ಕಾಂಗ್ರೆಸ್ ನ ವಕೀಲ ಸಮುದಾಯವಂತೂ ತೀವ್ರ ಅಪಮಾನ ಹಾಗೂ ಅಸಮಾಧಾನದಿಂದ ಕುದಿಯುತ್ತಿದೆ.
ರಾಜ್ಯದಲ್ಲಿ ಸರ್ಕಾರಗಳು ಬದಲಾಗುತ್ತಿದ್ದಂತೆ ಅಡ್ವೋಕೇಟ್ ಜನರಲ್, ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್,ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ವಿವಿಧ ಇಲಾಖೆಗಳು,ನಿಗಮಗಳ ವಕೀಲರೂ ಕೂಡಾ ಬದಲಾಗುವುದು ಸಂಪ್ರದಾಯ.
ಅದರಂತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಿರಿಯ ವಕೀಲ ಶಶಿ ಕಿರಣ್ ಶೆಟ್ಟಿ, ಅಡ್ವೋಕೇಟ್ ಜನರಲ್, ಎಸ್.ಎ.ಅಹಮದ್, ಬೆಳ್ಳಿಯಪ್ಪ ಸೇರಿದಂತೆ ಹಲವಾರು ಸಹಾಯಕ ಅಡ್ವೋಕೇಟ್ ಜನರಲ್ ಗಳಾಗಿ ನೇಮಕಗೊಂಡರು.
ಈ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿದವರಲ್ಲಿ ಅನೇಕರು ಬಿಜೆಪಿ ಕಾರ್ಯಕರ್ತರು ಎನ್ನುವುದು ವಿಶೇಷ.ಇದರ ಬಗ್ಗೆ ತೀವ್ರ ಅಸಮಾಧಾನಗೊಂಡ ಕಾಂಗ್ರೆಸ್ ಕಾರ್ಯಕರ್ತರಾಗಿರುವ ವಕೀಲರು ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದರು.ಈ ವೇಳೆ ತಮಗೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಕಚೇರಿಯಿಂದ ಬಂದ ಶಿಫಾರಸುಗಳನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತಂದಿರುವುದಾಗಿ ಹೇಳಿದರು. ಅಷ್ಟೇ ಅಲ್ಲ ಕೆಪಿಸಿಸಿ ಕಾನೂನು ಘಟಕ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ತಾವು ಆದೇಶದ ಮೂಲಕ ಜಾರಿಗೊಳಿಸುವ ಭರವಸೆ ನೀಡಿದ್ದರು.
ಇದಾದ ನಂತರ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಕೆಪಿಸಿಸಿ ವಕೀಲರ ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರೊಂದಿಗೆ ಸಭೆ ನಡೆಸಿ,ಸರ್ಕಾರ ನೇಮಿಸಿರುವ ವಕೀಲರ ಪಟ್ಟಿಯಲ್ಲಿ ನುಸುಳಿರುವ ಬಿಜೆಪಿ ಕಾರ್ಯಕರ್ತರ ಪಟ್ಟಿ ನೀಡುವಂತೆ ಸಲಹೆ ಮಾಡಿದ್ದರು. ಆದರೆ ಇಲ್ಲಿಯವರೆಗೆಕೆಪಿಸಿಸಿ ವಕೀಲರ ಘಟಕದಿಂದ ಕಾನೂನು ಸಚಿವರಿಗೆ ಈ ಪಟ್ಟಿ ರವಾನೆಯಾಗಿಲ್ಲ.
ಈ ನಡುವೆ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಕೀಲರ ಪ್ರತಿನಿಧಿಗಳನ್ನು ನೇಮಕ ಆದೇಶ ಹೊರಬಿದ್ದಿದೆ
ಇದರಲ್ಲೂ ಇದೀಗ ಬಿಜೆಪಿ ಕಾರ್ಯಕರ್ತರದ್ದೇ ಸಿಂಹಪಾಲು.ಈ ಹೆಸರುಗಳು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಕಚೇರಿಯಿಂದ ಕಾನೂನು ಸಚಿವರ ಕಚೇರಿ ತಲುಪಿ,ಆದೇಶವಾಗಿ ಹೊರಬಿದ್ದಿದೆ. ಇದು ಮತ್ತೆ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಇಲ್ಲಿ ಪ್ರಮುಖವಾಗಿ ಕೆಲಸ ಮಾಡಬೇಕಾಗಿರುವುದು ಪಕ್ಷದ ವಕೀಲರ ಘಟಕ. ಆದರೆ,ಈ ವಿಷಯದಲ್ಲಿ ಘಟಕದ ನಿರಾಸಕ್ತಿ ಪಕ್ಷದ ವಕೀಲ ಸಮುದಾಯದ ಆಸೆಗೆ ತಣ್ಣೀರೆರಚಿದೆ.
ಸಾಮಾನ್ಯವಾಗಿ ಇಂತಹ ನೇಮಕಾತಿ ಸಮಯದಲ್ಲಿ ವಕೀಲರ ಘಟಕದ ಅಧ್ಯಕ್ಷರು ತಮ್ಮ ಸಹೋದ್ಯೋಗಿಗಳ ಜೊತೆ ಸಮಾಲೋಚನೆ ಮಾಡಿ ಸಂಭಾವ್ಯರ ಪಟ್ಟಿಯನ್ನು ಪಕ್ಷದ ಅಧ್ಯಕ್ಷರಿಗೆ ನೀಡುತ್ತಾರೆ. ಇದನ್ನು ಪರಿಶೀಲಿಸುವ ಅಧ್ಯಕ್ಷರು ಅದನ್ನು ಮುಖ್ಯಮಂತ್ರಿಗಳಿಗೆ ರವಾನಿಸುತ್ತಾರೆ ಅಲ್ಲಿಂದ ಅದು ಕಾನೂನು ಸಚಿವರಿಗೆ ರವಾನೆಯಾಗಲಿದೆ.
ಆದರೆ,ಸದ್ಯ ವಕೀಲರ ಘಟಕದ ಅಧ್ಯಕ್ಷರಾಗಿರುವ ಪೊನ್ನಣ್ಣ ಮಂತ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದರು.ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಈ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.
ಸ್ವತಃ ಕಾನೂನು ಸಚಿವರೇ ಅವರಿಗೆ ಪಟ್ಟಿ ಕೇಳಿದರೂ ಇಲ್ಲಿಯವರೆಗೆ ಕೊಟ್ಟಿಲ್ಲ ಎಂದು ಸಚಿವರ ಆಪ್ತ ವಲಯಗಳು ತಿಳಿಸಿವೆ.ಇದರ ಪರಿಣಾಮ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ನ ಪಕ್ಷದ ಪರವಾಗಿ ಹೋರಾಟ ಮಾಡಿ,ದಾವೆಗಳನ್ನು ಹೂಡುವ, ಪೊಲೀಸರಿಗೆ ದೂರು ನೀಡುವ ಕೆಲಸ ಮಾಡುತ್ತಿದ್ದ ಕಾರ್ಯಕರ್ತರನ್ನು ಗುರುತಿಸುವರಿಲ್ಲದಂತಾಗಿದೆ. ಜೊತೆಗೆ ಅಂದು ಅಧಿಕಾರ ಹಿಡಿದವರೇ ಇಂದೂ ಅಧಿಕಾರ ಹಿಡಿಯುವ ಮೂಲಕ ಪಕ್ಷ ನಿಷ್ಠರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ.